ಬೆಂಗಳೂರು :ಸಾಂಕ್ರಾಮಿಕ ಕೊರೊನಾ ವೈರಸ್ನ ರೂಪಾಂತರವು ಸದ್ಯ ಹೊಸ ಹೊಸ ಅವಂತಾರವನ್ನ ಸೃಷ್ಟಿ ಮಾಡುತ್ತಿದೆ. ಸೋಂಕಿನ ತೀವ್ರತೆ ಕಡಿಮೆ ಆಗಿದ್ದ ಕಾರಣಕ್ಕೆ ಇತ್ತೀಚೆಗಷ್ಟೇ ಶಾಲಾ-ಕಾಲೇಜು ಸಹಜ ಸ್ಥಿತಿಗೆ ಮರಳುತ್ತಿವೆ.
ಈ ನಡುವೆ ಇದೀಗ ಹೊರ ದೇಶಗಳಲ್ಲಿ ಕಾಣಿಸಿರುವ ರೂಪಾಂತರಿ ಒಮಿಕ್ರೋನ್ ವೈರಸ್ಗೆ ರಾಜ್ಯದಲ್ಲಿ ಪೋಷಕರು ಭೀತಿಗೆ ಒಳಗಾಗಿದ್ದಾರೆ. ಪರಿಣಾಮ ಇದೀಗ ಶಾಲೆಗಳಿಗೆ ಮಕ್ಕಳನ್ನ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಕೊರೊನಾ ಸಂಬಂಧ ಇಂತಹ ಊಹಾಪೋಹಗಳನ್ನ ಹರಡದಿರಿ ಎಂದು ಖಾಸಗಿ ಶಾಲೆಗಳ ಸಂಘಟನೆಗಳು ಮನವಿ ಮಾಡಿವೆ.
ರೂಪಾಂತರಿ ವೈರಸ್ ಕುರಿತಂತೆ ವದಂತಿ ಹರಡದಂತೆ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ ಮನವಿ ಮಾಡಿರುವುದು.. ಈ ಕುರಿತು ಪ್ರತಿಕ್ರಿಯಿಸಿರುವ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಕೊರೊನಾ ರೂಪಾಂತರಿ ವೈರಸ್ ಒಮಿಕ್ರೋನ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದನ್ನ ನೋಡಿಕೊಂಡು ಪೋಷಕರು ಆತಂಕಕ್ಕೊಳಗಾಗಿದ್ದಾರೆ.
ಬೆಂಗಳೂರಿನಲ್ಲಿ ಅನೇಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸದೇ ಮನೆಯಲ್ಲೇ ಇರಿಸಿದ್ದಾರೆ. ಪರಿಣಾಮ ಶೇ.50ರಷ್ಟು ವಿದ್ಯಾರ್ಥಿಗಳು ಶಾಲೆಗೆ ಬಾರದ ಹಿನ್ನೆಲೆ ಬಹಳಷ್ಟು ಶಾಲೆಗಳು ಆನ್‌ಲೈನ್ ಪಾಠಕ್ಕೆ ಜೋತು ಬಿದ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಡಳಿತ ಮಂಡಳಿಗಳು ಭಯಪಡುವ ಅಗತ್ಯವಿಲ್ಲ. ಭಾರತಕ್ಕೆ ರೂಪಾಂತರಿ ಕಾಲಿಟ್ಟಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ಅದರ ಜೊತೆಗೆ ಈ ಹಿಂದೆ ಇದ್ದ ವೈರಸ್‌ಗಿಂತಲೂ ಪ್ರಭಾವ ಕಡಿಮೆ ಇರುವ ಕುರಿತು ತಜ್ಞ ವೈದ್ಯರು ಹೇಳುತ್ತಿದ್ದಾರೆ.
ಕಳೆದ ಎರಡು ವರ್ಷದಿಂದ ಸರಿಯಾದ ಶಿಕ್ಷಣವಿಲ್ಲದೇ ತೊಡಕು ಉಂಟಾಗಿದ್ದು, ಈಗಲೇ ಆತಂಕಗೊಂಡ ಮಕ್ಕಳ ಕಲಿಕೆಗೆ ಅಡ್ಡಗಾಲು ಆಗದಿರಿ ಎಂದು ಮನವಿ ಮಾಡಿದ್ದಾರೆ.
ಮಕ್ಕಳಿಗೆ ಶಾಲೆಗಳಿಂದ ವೈರಸ್ ಹರಡುತ್ತಿಲ್ಲ :
ರೂಪಾಂತರಿ ವೈರಸ್ ಕುರಿತಂತೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಹೇಳಿಕೆ ನೀಡಿರುವುದು.. ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಮಕ್ಕಳು ಶಾಲೆಗಳಿಗೆ ಬರುತ್ತಿರುವುದರಿಂದ ವೈರಸ್ ಹರಡುತ್ತಿಲ್ಲ. ಬದಲಿಗೆ ಇನ್ನಷ್ಟು ಸುರಕ್ಷಿತವಾಗಿ ಇದ್ದಾರೆ. ಪ್ರತಿ ಶಾಲೆಗಳು ಸರ್ಕಾರ ಸೂಚಿಸಿರುವ ಎಲ್ಲ ಎಸ್ಒಪಿಯನ್ನ ಪಾಲನೆ ಮಾಡಲಾಗುತ್ತಿದೆ. ಮಕ್ಕಳು ಯಾವುದೇ ಭೀತಿಯಿಲ್ಲದೇ ಧೈರ್ಯದಿಂದ ಶಾಲೆಗಳಿಗೆ ಬರಬಹುದು ಎಂದು ತಿಳಿಸಿದ್ದಾರೆ.
ಶಾಲಾ-ಕಾಲೇಜು ಬಿಟ್ಟ ನಂತರದ ಸಮಯದಲ್ಲಿ ಮಕ್ಕಳು ಸಾಮಾಜಿಕ ವ್ಯವಸ್ಥೆಯಡಿ ಬೆರೆಯುವಿಕೆಯಿಂದ ಕೊರೊನಾ ಹರಡುವ ಸಾಧ್ಯತೆ ಇದೆಯೇ ವಿನಃ ಶಾಲಾ-ಕಾಲೇಜುಗಳಿಗೆ ಬರುವುದರಿಂದ ಯಾವುದೇ ತೊಂದರೆ ಆಗುತ್ತಿಲ್ಲ. ಬಸ್ ನಿಲ್ದಾಣ, ಟ್ಯೂಷನ್, ಟೂಟೋರಿಯಲ್ ಇಂತಹ ಜಾಗದಲ್ಲಿ ಸರ್ಕಾರವು ಪ್ರತ್ಯೇಕ ಎಸ್ಒಪಿಗಳನ್ನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.