ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2021-22ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಜುಲೈ 1 ರಿಂದ ಪ್ರಾರಂಭಿಸಲು ಆದೇಶಿಸಲಾಗಿದೆ. ಜೂನ್ 15 ರಿಂದ ದಾಖಲಾತಿ ಪ್ರಕ್ರಿಯೆ ಶುರು ಮಾಡುವಂತೆ ಸೂಚಿಸಲಾಗಿದೆ. ಆದರೆ ನಗರದ ಹಲವು ಶಾಲೆಗಳು ನಿಗಧಿ ಮಾಡಿದ ದಿನಾಂಕಕ್ಕೂ ಮುನ್ನವೇ ಪೋಷಕರಿಗೆ ಶಾಲಾ ಶುಲ್ಕ ಕಟ್ಟುವಂತೆ ಒತ್ತಾಯ ಹೇರುತ್ತಿದೆಯೆನ್ನುವ ಆರೋಪ ಕೇಳಿಬರುತ್ತಿದೆ.
ನಗರದ ನಂದಿನಿ ಲೇಔಟ್ನಲ್ಲಿರುವ ಪ್ರೆಸಿಡೆನ್ಸಿ ಶಾಲೆಯ ಮುಂದೆ ಇಂದು ನೂರಾರು ಪೋಷಕರು ಜಮಾಯಿಸಿದ್ದಾರೆ. ಶೈಕ್ಷಣಿಕ ವರ್ಷ ಆರಂಭವೇ ಆಗಿಲ್ಲ, ಅದಕ್ಕೂ ಮುನ್ನವೇ ಫೀಸ್ ಕಟ್ಟಿ ಅನ್ನೋದು ಎಷ್ಟು ಸರಿ? ಫೀಸ್ ಕಟ್ಟಿಲ್ಲ ಅಂದರೆ ಆನ್ಲೈನ್ ತರಗತಿ ಇಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ಫೀಸ್ ಕಟ್ಟದ ಮಕ್ಕಳನ್ನು ಆನ್ ಲೈನ್ ಕ್ಲಾಸ್ನಿಂದ ರಿಮೂವ್ ಮಾಡಿದ್ದಾರಂತೆ. ಹೀಗಾಗಿ, ಆತಂಕಕ್ಕೆ ಒಳಗಾದ ಪೋಷಕರು, ಶಾಲೆಯ ಮುಂದೆ ಜಮಾಯಿಸಿದ್ದಾರೆ.