ಬೆಂಗಳೂರು : ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟ ಪ್ರಕರಣದಲ್ಲಿ ಪೊಲೀಸರ ಕ್ರಮ ವಿರೋಧಿಸಿ ಮೃತರ ಮನೆ ಮುಂದೆ ಪ್ರತಿಭಟಿಸುತ್ತಿದ್ದ ಸ್ಥಳೀಯರು ಹಾಗೂ ಇನ್ಸ್ಪೆಕ್ಟರ್ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ನಡೆದಿದೆ. ಪ್ರಕರಣದಲ್ಲಿ ಸೂಕ್ತ ತನಿಖೆ ಮಾಡದ ಕೋಣನಕುಂಟೆ ಠಾಣಾ ಪೊಲೀಸರು ಸೆಕ್ಯುರಿಟಿ ಗಾರ್ಡ್ನ ಬಂಧಿಸುವ ಮೂಲಕ ಆರೋಪಿಗಳ ಪರ ಇದ್ದಾರೆ ಎಂದು ಸ್ವಿಮ್ಮಿಂಗ್ ಪೂಲ್ ಮುಂದೆ ಪ್ರತಿಭಟಿಸಲು ಮುಂದಾದಾಗ ಬಾಲಕರ ಕಡೆಯವರು ಹಾಗೂ ಕೋಣನಕುಂಟೆ ಠಾಣಾ ಇನ್ಸ್ಪೆಕ್ಟರ್ ಶಿವಕುಮಾರ್ ನಡುವೆ ವಾಗ್ವಾದ ನಡೆದಿದೆ. 'ನಾನಿರುವುದೇ ಪರಿಸ್ಥಿತಿ ನಿಯಂತ್ರಣಕ್ಕೆ, ನಮ್ಮ ವ್ಯಾಪ್ತಿಗೆ ಮೃತದೇಹಗಳನ್ನ ತರಬೇಡಿ' ಎಂದು ಇನ್ಸ್ಪೆಕ್ಟರ್ ಹೇಳಿದಾಗ ಮೃತ ಬಾಲಕರ ಕಡೆಯವರು ಧಿಕ್ಕಾರ ಕೂಗುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಬಳಿಕ ಜರಗನಹಳ್ಳಿ ಬಾಲಕರ ಮನೆ ಮುಂದೆ ಇಬ್ಬರೂ ಬಾಲಕರ ಮೃತದೇಹ ಇಟ್ಟು ಪ್ರತಿಭಟನೆ ಮಾಡಲಾಗಿದ್ದು, ಮಕ್ಕಳ ಸಾವಿಗೆ ನ್ಯಾಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಸತೀಶ್ ರೆಡ್ಡಿ ಮೃತರ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಗಿದೆ. ಈಜಲು ತೆರಳಿದ್ದ ಜಯಂತ್ (13) ಹಾಗೂ ಮೋಹನ್ (13) ಎಂಬ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನ ಕೋಣನಕುಂಟೆ ಠಾಣಾ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ನಗರದ ಎಂಎನ್ಸಿ ಅಕಾಡೆಮಿಯಲ್ಲಿ ನಡೆದಿತ್ತು.
ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಇಬ್ಬರು ಯುವಕರು ಮೃತ (ಚಿಕ್ಕಮಗಳೂರು): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ನಿಲುವಾಗಿಲು ಗ್ರಾಮದ ಸುಬ್ರಮಣ್ಯ(30) ಹಾಗೂ ಸುನೀಲ್ (27) ಮೃತ ದುರ್ದೈವಿಗಳು ಎಂಬುದು ತಿಳಿದು ಬಂದಿದೆ.