ಕರ್ನಾಟಕ

karnataka

ETV Bharat / state

ಸ್ವಚ್ಛತೆ ಕಾಪಾಡಿ ಮಾದರಿಯಾದ ಪರಪ್ಪನ ಅಗ್ರಹಾರ ಕಾರಾಗೃಹ

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ದೇಶದಲ್ಲೇ ಅತಿ‌‌ ದೊಡ್ಡ ಜೈಲು ಎಂದು ಹೇಳಲಾಗುತ್ತಿದ್ದು, ಸದ್ಯ 5,200 ಕೈದಿಗಳಿದ್ದಾರೆ. ಸೆಂಟ್ರಲ್ ಜೈಲಿನ ಆಹಾರ ಗುಣಮಟ್ಟ ಹಾಗೂ ಸ್ವಚ್ಛತೆಗಾಗಿ ಕೇಂದ್ರದ ಆಹಾರ ಭದ್ರತೆ ಹಾಗೂ ಸುರಕ್ಷತೆ ಪ್ರಾಧಿಕಾರ (ಎಫ್​ಎಸ್​ಎಸ್ಎಐ) ಹಾಗೂ ಆಲ್‌ ಇಂಡಿಯಾ ಅಧಿಕಾರಿಗಳು ಪರಿಶೀಲನೆ ನಡೆಸಿ 4 ಸ್ಟಾರ್ ರೇಟಿಂಗ್ ನೀಡಿ ಪ್ರಮಾಣೀಕರಿಸಿದ್ದಾರೆ.

By

Published : Sep 6, 2022, 10:58 PM IST

ಪರಪ್ಪನ ಅಗ್ರಹಾರ ಕಾರಾಗೃಹ
ಪರಪ್ಪನ ಅಗ್ರಹಾರ ಕಾರಾಗೃಹ

ಬೆಂಗಳೂರು: ಅಕ್ರಮ ಚಟುವಟಿಕೆ ತಾಣ ಎಂದೇ‌ ಕುಖ್ಯಾತಿಗೊಂಡಿದ್ದ ಪರಪ್ಪನ ಅಗ್ರಹಾರ ಜೈಲು ಇದೀಗ ದೇಶದ ಎಲ್ಲಾ ಜೈಲುಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ. ದೇಶದಲ್ಲಿರುವ ಒಟ್ಟು 1,319 ಜೈಲುಗಳಿಗೆ ಹೋಲಿಸಿದರೆ ಬೆಂಗಳೂರಿನ ಸೆಂಟ್ರಲ್ ಜೈಲು ಅತಿ ಹೆಚ್ಚು ಶುಚಿತ್ವ ಹೊಂದಿರುವ ಕೀರ್ತಿಗೆ ಪಾತ್ರವಾಗಿದೆ.‌ ಇದಕ್ಕೆ‌ ಪೂರಕವೆಂಬಂತೆ ಕೇಂದ್ರ ಗೃಹ ಸಚಿವಾಲಯವೇ ಅತಿ ಶುಚಿತ್ವದ ಜೈಲು ಎಂದು ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದೆ.

ಪರಪ್ಪನ ಅಗ್ರಹಾರ ಕಾರಾಗೃಹ

ಅಕ್ರಮ ಗೂಡು ಎಂದು ಪ್ರತಿಬಿಂಬಿತವಾಗಿದ್ದ ಪರಪ್ಪನ ಜೈಲು ಇತ್ತೀಚೆಗೆ ಕೈದಿಗಳಿಂದ ಡ್ರಗ್ಸ್ ಸೇವನೆ, ಅಕ್ರಮವಾಗಿ ಪೋನ್ ಬಳಸಿ ಕರೆ ಮಾಡುವುದು ಸೇರಿದಂತೆ ವಿವಿಧ ಅನೈತಿಕ ತಾಣ ಎಂದು‌ ಕುಖ್ಯಾತಿ ಪಡೆದಿತ್ತು. ಅಲ್ಲದೇ, ಪರೋಕ್ಷವಾಗಿ ಜೈಲು ಸಿಬ್ಬಂದಿಯೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಈ ಹಿಂದೆ ಕೇಳಿಬಂದಿತ್ತು.

ಈ ಬಗ್ಗೆ ರಾಜ್ಯ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಿ ಅಧಿಕಾರಿ ಹಾಗೂ ಸಿಬ್ಬಂದಿ ಎತ್ತಂಗಡಿ ಮಾಡಿಸಿತ್ತು‌. ಅಕ್ರಮ ತಡೆಗಟ್ಟಲು ಜೈಲು‌ ಪ್ರವೇಶದ್ವಾರದ ಬಳಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಫ್) ಸಿಬ್ಬಂದಿಯನ್ನು ಹೆಚ್ಚಿನ‌‌ ಸಂಖ್ಯೆಯಲ್ಲಿ ನಿಯೋಜಿಸಿತ್ತು. ಅಲ್ಲದೆ ಜೈಲಿನ ಅವ್ಯವಸ್ಥೆಗಳ ಬಗ್ಗೆ ಸಜಾಬಂಧಿಗಳಿಂದ‌ ದೂರು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಜೈಲಾಧಿಕಾರಿಗಳು ತೆಗೆದುಕೊಂಡ ಕ್ರಮಗಳ ಫಲವಾಗಿ ಪರಪ್ಪನ ಅಗ್ರಹಾರ ಜೈಲು ದೇಶದ ಇತರ ಜೈಲುಗಳಿಗಿಂತ ಮೊದಲ ಸ್ಥಾನ ಪಡೆದಿದೆ. ಆಂಧ್ರಪ್ರದೇಶ ವಿಶಾಖಪಟ್ಟಣ ಹಾಗೂ ತಮಿಳುನಾಡಿನ ಪುಳಲು ಕೇಂದ್ರ ಕಾರಾಗೃಹಕ್ಕೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದೆ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ದೇಶದಲ್ಲೇ ಅತಿ‌‌ ದೊಡ್ಡ ಜೈಲು ಎಂದು ಹೇಳಲಾಗುತ್ತಿದ್ದು, ಸದ್ಯ 5200 ಕೈದಿಗಳಿದ್ದಾರೆ. ಸೆಂಟ್ರಲ್ ಜೈಲಿನ ಆಹಾರ ಗುಣಮಟ್ಟ ಹಾಗೂ ಸ್ವಚ್ಛತೆಗಾಗಿ ಕೇಂದ್ರದ ಆಹಾರ ಭದ್ರತೆ ಹಾಗೂ ಸುರಕ್ಷತೆ ಪ್ರಾಧಿಕಾರ (ಎಫ್​ಎಸ್​ಎಸ್ಎಐ) ಹಾಗೂ ಆಲ್‌ ಇಂಡಿಯಾ ಅಧಿಕಾರಿಗಳು ಪರಿಶೀಲನೆ ನಡೆಸಿ 4 ಸ್ಟಾರ್ ರೇಟಿಂಗ್ ನೀಡಿ ಪ್ರಮಾಣೀಕರಿಸಿದ್ದಾರೆ.

ಕಳೆದ ತಿಂಗಳು ಐವರು ಅಧಿಕಾರಿಗಳು ಕೇಂದ್ರ ಕಾರಾಗೃಹದ ವಿವಿಧ ವಿಭಾಗಗಳಿಗೆ ಬಂದು ಪರಿಶೀಲಿಸಿದ್ದರು. ಜೈಲು ಆಸ್ಪತ್ರೆ, ಕ್ಯಾಂಟೀನ್​, ಕೈದಿಗಳು ಕೆಲಸ ಮಾಡುವ ಜಾಗ, ಬ್ಯಾರಕ್​ಗಳು ಹಾಗೂ ಜೈಲು ಆವರಣದಲ್ಲಿ ನೀಡಿ ಪರಿಶೀಲನೆ‌‌ ನಡೆಸಿದ್ದರು.

ಮೊದಲ ಸ್ಥಾನ ಬಂದಿದ್ದು ಹೇಗೆ ?:ಕಳೆದ ತಿಂಗಳು 26ರಂದು ದೆಹಲಿಯಿಂದ ಬಂದಿದ್ದ ಅಧಿಕಾರಿಗಳ ತಂಡ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿತ್ತು. 14 ಅಂಶಗಳ ಆಧಾರದ‌ ಮೇರೆಗೆ ಸ್ವಚ್ಚ ಜೈಲು‌ ಪ್ರಶಸ್ತಿ ಘೋಷಿಸಲಾಗಿದೆ. ಜೈಲಿನಲ್ಲಿ ಅಡುಗೆ ತಯಾರು ಹೇಗೆ ? ಅಡುಗೆ ಕೋಣೆ ನಿರ್ವಹಣೆ ಮತ್ತು ಶುದ್ಧತೆ, ಅದರ ಬಗ್ಗೆ ಕೈದಿಗಳ ಜ್ಞಾನ, ಅದರಲ್ಲಿರುವ ವಸ್ತುಗಳು ಮತ್ತು ಆಹಾರ ಪದಾರ್ಥಗಳ ಸರಿಯಾಗಿವೆಯೇ ? ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ.

ಶೌಚಾಲಯ, ಸ್ನಾನದ ಗೃಹಗಳು ಸ್ವಚ್ಛತೆ ಕೈದಿಗಳಿಗೆ ತಕ್ಕಂತೆ ಶೌಚಾಲಯ ಇದೆಯೇ? ಆಡಳಿತ ಕೋಣೆ, ಕಡತಗಳ ನಿರ್ವಹಣೆ, ಆಸ್ಪತ್ರೆಗಳ ನಿರ್ವಹಣೆ, ಎಷ್ಟು ಮಂದಿ ವೈದ್ಯರು, ನರ್ಸ್‌ಗಳು ಇದ್ದಾರೆ. ಮೆಡಿಕಲ್ ಸ್ಟೋರ್‌ನಲ್ಲಿ ಎಲ್ಲ ಬಗೆಯ ಮಾತ್ರೆಗಳು ಇವೆಯೇ? ಅಲ್ಲಿನ ಸ್ವಚ್ಛತೆ ಹೇಗೆ? ಸೌಲಭ್ಯಗಳು ಹೇಗಿವೆ?
ಜೈವಿಕ ತ್ಯಾಜ್ಯ ಹೇಗೆ? ವಿಲೇವಾರಿ ಮಾಡುತ್ತಾರೆ. ಗರ್ಭಿಣಿಯರಿಗೆ ಯಾವ ಸೌಲಭ್ಯ. ಅವರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆಯೇ? ಒಳಚರಂಡಿ, ಕೊಳಚೆ ನೀರಿನ ಶುದ್ದೀಕರಣ ಘಟಕಗಳು ಇವೆಯೇ? ಕೈದಿಗಳಿಗೆ ಶುದ್ಧ ನೀರು ಕೊಡಲಾಗುತ್ತಿದೆಯೇ?

ಜೈಲಿನಲ್ಲಿರುವ ಒಣ ಮತ್ತು ಹಸಿ ಕಸ ನಿರ್ವಹಣೆ ಹೇಗೆ? ಎಂಬುದು ಸೇರಿದಂತೆ 14 ಮಾನದಂಡಗಳನ್ನು ಆಯ್ದುಕೊಂಡು ಈ ಪ್ರಶಸ್ತಿ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರಾಗೃಹ ಹಾಗೂ ಸುಧಾರಣೆ ಸೇವೆ ಇಲಾಖೆಯ ಡಿಜಿಪಿ ಅಲೋಕ್ ಮೋಹನ್‌‌‌, ದೇಶದ ಎಲ್ಲ ಜೈಲುಗಳಿಗೆ ಹೋಲಿಸಿದರೆ ಪರಪ್ಪನ ಅಗ್ರಹಾರ ಜೈಲು ಶುಚಿತ್ವ ಹೊಂದಿರುವ ಕಾರಾಗೃಹ ಎಂದು ಕೀರ್ತಿಗೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದಿದ್ದಾರೆ.

ಓದಿ:ಬೆಂಗಳೂರಲ್ಲಿ ಮುಂದುವರಿದ ಮಳೆ: ಇಂದು ರಾತ್ರಿ ಸಿಟಿ ರೌಂಡ್ಸ್ ಹಾಕಲಿರುವ ಸಿಎಂ

ABOUT THE AUTHOR

...view details