ಬೆಂಗಳೂರು:ಗಾಂಧೀಜಿಯವರನ್ನು ಕೊಂದ ಗೋಡ್ಸೆಯನ್ನು ರಾಜೀವ್ ಗಾಂಧಿಯವರೊಂದಿಗೆ ಹೋಲಿಸಿ ಬಿಜೆಪಿ ತನ್ನ ನೀಚ ಸಂಸ್ಕೃತಿಯನ್ನು ಪ್ರದರ್ಶಿಸಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಅನಂತಕುಮಾರ್ ಹೆಗಡೆ ಮತ್ತು ನಳಿನ್ ಕುಮಾರ್ ಕಟೀಲ್ ಅವರು ಹೀನಾಯ ಮಾತುಗಳನ್ನಾಡಿ, ಈಗ ಕ್ಷಮೆ ಕೋರಿ ತೇಪೆ ಹಚ್ಚಲು ಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿ ಕಾರಿದ್ದಾರೆ.
ದಿನೇಶ್ ಗುಂಡೂರಾವ್ ಟ್ವೀಕಾಸ್ತ್ರ:
ಗೋಡ್ಸೆ ಗುಣಗಾನ ಮಾಡಿ ಟ್ವೀಟ್ ಮಾಡಿರುವ ಬಿಜೆಪಿ ಸಂಸದರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ್ ಕುಮಾರ್ ಟ್ವೀಟ್ ಅವರು ಯಾರ ಕಡೆ ಇದ್ದಾರೆ ಎಂಬುದು ತೋರಿಸುತ್ತದೆ.
ಒಂದು ವೇಳೆ ಮೋದಿ ಸರ್ಕಾರ ಐದು ವರ್ಷ ಆಡಳಿತ ನಡೆಸಿದರೆ, ಮಹಾತ್ಮ ಗಾಂಧಿ ಹೇಗೆ ದೇಶ ವಿರೋಧಿಯಾಗಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯಲು ಪ್ರಾರಂಭವಾಗುತ್ತದೆ. ಗೋಡ್ಸೆಯ ಸ್ಮಾರಕಗಳನ್ನು ದೇಶಾದ್ಯಂತ ನಿರ್ಮಿಸಲು ಮುಂದಾಗುತ್ತಾರೆ. ಅದು ಆರ್ಎಸ್ಎಸ್ನ ಅಂತಿಮ ವಿಚಾರಧಾರೆಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಮೂವರು ಬಿಜೆಪಿ ಸಂಸದರಿಗೆ 10 ದಿನಗಳಲ್ಲಿ ಸ್ಪಷ್ಟೀಕರಣ ಕೋರಿ ಅಮಿತ್ ಶಾ ನೀಡಿರುವ ನೋಟಿಸ್ ಬಗ್ಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟಿರುವ ದಿನೇಶ್ ಗಂಡೂರಾವ್, ಆ ವೇಳೆಗೆ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಯಾರೂ ನಿಮ್ಮನ್ನು ಗಣನೆಗೆ ತೆಗೆದುಕೊಳ್ಳಲ್ಲ. ಏಕೆಂದರೆ ಅದಾಗಲೇ ಬಿಜೆಪಿ ಪಕ್ಷದ ಹೀನಾಯ ಸೋಲಿನ ಬಗ್ಗೆ ನೀವು ಪರಾಮರ್ಶೆಯಲ್ಲಿ ತೊಡಗಿರ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.