ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕರ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಏರುಧ್ವನಿಯಲ್ಲಿ ಮಾತನಾಡಿದ ಸನ್ನಿವೇಶ ಸೃಷ್ಟಿಯಾಯ್ತು ಎಂಬ ಮಾಹಿತಿ ಲಭಿಸಿದೆ.
ನಗರದ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಇಂದು ನಡೆದ ರಾಜ್ಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆಯಲ್ಲಿ ಇಂತಹದ್ದೊಂದು ಸನ್ನಿವೇಶ ಸೃಷ್ಟಿಯಾಗಿದೆ. ಮಾಜಿ ಉಪ ಮುಖ್ಯಮಂತ್ರಿಯಾಗಿರುವ ತಾವು ಕೇವಲ ಕೊರಟಗೆರೆಗೆ ಮಾತ್ರ ಸಿಮೀತ ಆಗಬೇಡಿ ಅಂತ ಹೇಳಿದ ಹಿರಿಯ ನಾಯಕರ ವಿರುದ್ಧ ಪರಮೇಶ್ವರ್ ಗರಂ ಆಗಿದ್ದಾರೆ.
ಜಿಲ್ಲೆಯಲ್ಲಿ ವರ್ಚಸ್ಸು ಬೆಳೆಸಿಕೊಳ್ಳಿ ಅಂದಿದ್ದ ಹಿರಿಯ ನಾಯಕರ ವಿರುದ್ಧವೇ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್ಸಿ ಮತ್ತು ಎಸ್ಟಿ ಸಮುದಾಯ ಕಾಂಗ್ರೆಸ್ ಕೈ ಬಿಟ್ಟಿದೆ ಅಂತ ಸಭೆಯಲ್ಲಿ ಕೆಲವರು ಹೇಳಿದ್ದಕ್ಕೆ ಕೂಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ನಾವು ಅಧಿಕಾರದಲ್ಲಿದ್ದಾಗ ಆ ಸಮುದಾಯಕ್ಕೆ ಕೆಲಸ ಮಾಡಿದ್ದೇವೆ. ಸಿದ್ದರಾಮಯ್ಯ ಅದು ಕೊಟ್ರು, ಇದು ಕೊಟ್ರು ಅಂತ ಹೇಳ್ತಾರೆ. ಅದನ್ನ ಆ ಸಮುದಾಯಕ್ಕೆ ಕನ್ವೆನ್ಸ್ ಮಾಡುವ ಕೆಲಸ ಮಾಡಿದ್ದೀವಾ? ಚುನಾವಣಾ ಸಮಯದಲ್ಲಿ ದೊಡ್ಡ ಮಟ್ಟದ ಸಭೆ ಮಾಡ್ತೀವಿ. ಆದ್ರೆ ಮೈಕ್ರೋ ಮ್ಯಾನೆಜ್ಮೆಂಟ್ ಮಾಡ್ತೀವಾ? ಬಿಜೆಪಿ ಅವರು ಏನು ಮಾಡಲ್ಲ. ಜಾಹೀರಾತು ಮತ್ತು ಮೈಕ್ರೋ ಮ್ಯಾನೇಜ್ಮೆಂಟ್ ಮಾಡೋದರಲ್ಲಿ ಸಕ್ಸಸ್ ಆಗ್ತಾರೆ. ಶಿರಾ ಮತ್ತು ಆರ್.ಆರ್. ನಗರದಲ್ಲಿ ಆಗಿದ್ದು ಅದೇ ಅಂತ ಏರುಧ್ವನಿಯಲ್ಲಿ ಮಾತನಾಡಿದ್ದಾರೆ.
ಮೈಕ್ರೋ ಮ್ಯಾನೇಜ್ಮೆಂಟ್ನಲ್ಲಿ ವಿಫಲ:ಸುಮ್ನೆ ದಲಿತರ ವೋಟು, ದಲಿತರ ವೋಟು ಅಂದ್ರೆ ಆಗಲ್ಲ. ಯಾವುದು ವೋಟ್ ಬ್ಯಾಂಕ್ ಅಲ್ಲ. ಮೈಕ್ರೋ ಮ್ಯಾನೇಜ್ಮೆಂಟ್ನಲ್ಲಿ ವಿಫಲರಾಗಿದ್ದೇವೆ. ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಕೋಪಗೊಂಡ ಪರಮೇಶ್ವರ್ ಅವರನ್ನು ಉಳಿದ ನಾಯಕರು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.