ಬೆಂಗಳೂರು :ಶಾಸಕಾಂಗ ನಾಯಕನ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷರ ರಾಜೀನಾಮೆ ಬಗ್ಗೆ ನಾವೆಲ್ಲಾ ಇಂದು ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಆದಷ್ಟು ಶೀಘ್ರವಾಗಿ ಗೊಂದಲ ಬಗೆಹರಿಯಲಿದೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸಭೆ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿ. ಪರಮೇಶ್ವರ್ ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಕರೆದಿದ್ದ ಕಾಂಗ್ರೆಸ್ನ ಹಿರಿಯ ನಾಯಕರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಹೈಕಮಾಂಡ್ ಸೂಚನೆಯಂತೆ ನಾನು ಸಭೆ ಕರೆದಿದ್ದೆ. ಈಗ ಎಲ್ಲರ ಅಭಿಪ್ರಾಯ ಪಡೆದಿದ್ದೇನೆ. ಎಲ್ಲ ನಾಯಕರ ಅಭಿಪ್ರಾಯವನ್ನು ಹೈಕಮಾಂಡ್ಗೆ ತಿಳಿಸುತ್ತೇನೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ, ಬಿಬಿಎಂಪಿ ಚುನಾವಣೆ ಬರುತ್ತಿದೆ. ಅದಕ್ಕೂ ನಾವು ತಯಾರಾಗಬೇಕಿದೆ. ಕೆಪಿಸಿಸಿ ಅಧ್ಯಕ್ಷರು, ಸಿಎಲ್ಪಿ ನಾಯಕ ಸ್ಥಾನದ ಬಗ್ಗೆ ನಿರ್ಧಾರವಾಗಬೇಕು. ಆ ನಂತರ ಮುಂದಿನ ಚಟುವಟಿಕೆ ನಡೆಸಲು ಸರಿಯಾಗಲಿದೆ ಎಂದರು.
ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಯಾರು ಅಧ್ಯಕ್ಷರಾಗಬೇಕೆಂದು ವೈಯಕ್ತಿಕ ಚರ್ಚೆಯಾಗಿಲ್ಲ. ಆಕಾಂಕ್ಷಿಗಳ ಬಗ್ಗೆಯೂ ಚರ್ಚೆ ಆಗಿಲ್ಲ. ಹೈಕಮಾಂಡ್ ನಮಗೆ ತಿಳಿಸಿದ ಬಳಿಕ ದೆಹಲಿಗೆ ಹೋಗುತ್ತೇವೆ. ಹೈಕಮಾಂಡ್ ಕರೆದು ಅಂತಿಮ ತೀರ್ಮಾನ ಮಾಡಬಹುದು ಎಂದು ಹೇಳಿದರು.
ಸಿಎಲ್ಪಿ ಹಾಗೂ ವಿಪಕ್ಷ ನಾಯಕರ ಸ್ಥಾನ ಪ್ರತ್ಯೇಕದ ಬಗ್ಗೆ ಚರ್ಚೆ ನಡೆಸಿಲ್ಲ ಎಂದ ಅವರು, ನಮ್ಮಲ್ಲಿ ಗೊಂದಲಗಳಿವೆ ಎಂಬ ರೀತಿ ಮಾಧ್ಯಮಗಳಲ್ಲಿ ಸುದ್ದಿಗಳಿದ್ದವು. ಹೀಗಾಗಿ ಇಂದು ಸಭೆ ನಡೆಸಿ ನಮ್ಮಲ್ಲಿ ಗೊಂದಲಗಳಿಲ್ಲ ಅನ್ನೋದನ್ನ ತೋರಿಸಿದ್ದೇವೆ. ಸಭೆಯ ಮಾಹಿತಿಯನ್ನು ಹೈಕಮಾಂಡ್ಗೆ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದರು.