ಬೆಂಗಳೂರು: ಭಾರಿ ಮಳೆಯಿಂದಾಗಿ ರಾಜ್ಯಾದ್ಯಂತ ಉಂಟಾಗಿರುವ ಹಾನಿಗೆ ಕೇಂದ್ರ ಸರ್ಕಾರ ತಕ್ಷಣ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಬಿಡಿಎ ಕ್ವಾಟ್ರಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ನೆರೆ ಪರಿಸ್ಥಿತಿ ವಿಪರೀತವಾಗಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ನಿಭಾಯಿಸಲು ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರವೇ ಇಲ್ಲ. ಪ್ರಧಾನಿ ಅಥವಾ ಕೇಂದ್ರ ಗೃಹ ಸಚಿವರು ಕೂಡಲೇ ರಾಜ್ಯದಲ್ಲಿ ನೆರೆ ಪರಿಸ್ಥಿತಿಯನ್ನೂ ವೈಮಾನಿಕ ಸಮೀಕ್ಷೆ ನಡೆಸಿ, 10 ಸಾವಿರ ಕೋಟಿ ರು. ಮೊತ್ತದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಜೊತೆಗೆ ಕೇಂದ್ರದಿಂದ ತಂಡ ಕಳುಹಿಸಿ ಸೂಕ್ತ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಿದ್ಧಾರ್ಥ ನೆರವು:
ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕನಾಗಿ ನನ್ನ ಒಂದು ತಿಂಗಳ ಸಂಬಳ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ ರುಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇನೆ. ಶಾಸಕಾಂಗ ಪಕ್ಷದ ಕಡೆಯಿಂದಲೂ ಶಾಸಕರಿಗೆ ಒಂದು ತಿಂಗಳ ವೇತನ ನೀಡುವಂತೆ ಒತ್ತಾಯಿಸಲು ಸಿದ್ದರಾಮಯ್ಯ ಅವರನ್ನು ಮನವಿ ಮಾಡುತ್ತೇನೆ. ದಿನೇಶ್ ಗುಂಡೂರಾವ್ ಕೂಡ ಈಗಾಗಲೇ ಈ ಭರವಸೆ ನೀಡಿದ್ದು ಶಾಸಕಾಂಗದ ವತಿಯಿಂದಲೂ ಒಂದು ಸೂಚನೆ ರವಾನೆಯಾಗಬೇಕು ಎಂದರು.
ಬಿಜೆಪಿಯವರಿಗೆ ಕಾಂಗ್ರೆಸ್, ಜೆಡಿಎಸ್ ಶಾಸಕರಿಂದ ರಾಜೀನಾಮೆ ಕೊಡಿಸಲು, ಸರ್ಕಾರ ಬೀಳಿಸಲು ಇದ್ದ ಆಸಕ್ತಿ ಸರ್ಕಾರ ರಚಿಸಲು ಯಾಕೆ ತೋರಿಸುತ್ತಿಲ್ಲ. ರಾಜ್ಯಪಾಲರು ಕಣ್ಣು ಮುಚ್ಚಿ ಕುಳಿತಿದ್ದಾರಾ? ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಕಾಯುತ್ತಿದ್ದರೆ ಅದನ್ನು ಬಹಿರಂಗ ಪಡಿಸಿ. ಅವರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದೀರಾ? ಎಂದು ಪ್ರಶ್ನಿಸಿದರು.
ಅಧಿಕಾರಿಗಳು ನಿರಾಳರಾಗಿದ್ದಾರೆ:
ಸರ್ಕಾರ ಇಲ್ಲ ಎಂದರೆ ಅಧಿಕಾರಿಗಳು ಆರಾಮಾಗಿ ಕುಳಿತಿದ್ದಾರೆ. ಯಾವ ನೋಡೆಲ್ ಅಧಿಕಾರಿಗಳು ಕ್ಯಾಂಪ್ ಮಾಡಿಲ್ಲ. ತಕ್ಷಣ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಯಾಕೆ ಮಾಡಿಲ್ಲ ಎಂಬ ಕಾರಣ ಬಹಿರಂಗ ಪಡಿಸಬೇಕು. ಈ ಸರ್ಕಾರ ಹೇಗೆ ಕೆಲಸ ಮಾಡುತ್ತೆ ಎಂದು ಗಮನಿಸುತ್ತೇನೆ. ಕಾನೂನು ಬಾಹಿರವಾಗಿ ಏನೇ ತೀರ್ಮಾನ ಆದರೂ ಅದನ್ನು ಜನರ ಗಮನಕ್ಕೆ ತರುತ್ತೇವೆ. ನಮ್ಮ ಸರ್ಕಾರ ಯಾವುದೂ ಕಾನೂನು ಬಾಹಿರವಾಗಿ ಕೆಲಸ ಮಾಡಿಲ್ಲ.