ಬೆಂಗಳೂರು:ಹೈಕೋರ್ಟ್ನಲ್ಲಿ ಖಾಲಿ ಇರುವ ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಗೆ ಜಿಲ್ಲಾ ನ್ಯಾಯಾಧೀಶರಾಗಿದ್ದ ಪಂಜಿಗದ್ದೆ ಕೃಷ್ಣ ಭಟ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ರಾಷ್ಟ್ರಪತಿ ಆದೇಶಾನುಸಾರ ಕೇಂದ್ರ ಕಾನೂನು ಸಚಿವಾಲಯ, ನ್ಯಾ. ಪಿ.ಕೃಷ್ಣ ಭಟ್ ಅವರನ್ನು ಎರಡು ವರ್ಷಗಳ ಅವಧಿಗೆ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿದೆ.
ಸುಪ್ರೀಂಕೋರ್ಟ್ ಕೊಲಿಜಿಯಂ 2016ರ ಆಗಸ್ಟ್ನಲ್ಲಿ ಮೊದಲ ಬಾರಿಗೆ ಕೃಷ್ಣ ಭಟ್ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಶಿಫಾರಸು ಪರಿಗಣಿಸಿರಲಿಲ್ಲ. ಈ ವೇಳೆ ಕೇಂದ್ರ ಸರ್ಕಾರವು ನ್ಯಾಯಾಂಗದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ನಂತರ 2019ರ ಅ.15ರಂದು ಸುಪ್ರೀಂಕೋರ್ಟ್ ಕೋಲಿಜಿಯಂ ಎರಡನೇ ಬಾರಿಗೆ ನ್ಯಾ. ಪಿ. ಕೃಷ್ಣ ಭಟ್ ಅವರ ಹೆಸರನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿತ್ತು.
ಕಳೆದ 7 ತಿಂಗಳಿಂದ ಕಡತವನ್ನು ತನ್ನಲ್ಲೇ ಉಳಿಸಿಕೊಂಡಿದ್ದ ಕೇಂದ್ರ ಸರ್ಕಾರ ಸೋಮವಾರ ವಿಲೇವಾರಿ ಮಾಡಿದೆ. 1960 ರಲ್ಲಿ ಜನಿಸಿರುವ ನ್ಯಾ. ಪಿ.ಕೃಷ್ಣ ಭಟ್ ಅವರು ಮುಂದಿನ ಎರಡು ವರ್ಷಗಳ ಕಾಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.