ಬೆಂಗಳೂರು: ಇ-ಟೆಂಡರ್ನಲ್ಲಿ ಅತಿ ಹೆಚ್ಚು ಬಿಡ್ ಮಾಡುವ ಮೂಲಕ ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಗ್ರೂಫ್ ತನ್ನದಾಗಿಸಿಕೊಂಡಿದೆ.
ಈಗಿರುವ 3,500 ಟಿಸಿಡಿಯಿಂದ 5,000 ಟಿಸಿಡಿಗೆ ವಿಸ್ತರಣೆ ಮಾಡಲಾಗುವುದು. 20 ಮೆಗಾ ವ್ಯಾಟ್ ವಿದ್ಯುತ್ ಘಟಕ ಆರಂಭಿಸುತ್ತೇವೆ. ನಿತ್ಯ 60,000 ಲೀಟರ್ ಇಥೆನಾಲ್ ಉತ್ಫಾದಿಸುವ ಡಿಸ್ಟಿಲರಿಯನ್ನು ಪ್ರಾರಂಭಿಸುವ ಷರತ್ತಿಗೆ ಒಳಪಟ್ಟು ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ಪಡೆಯಲಾಗಿದೆ ಎಂದು ಶಾಸಕ/ ನಿರಾಣಿ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಮುರುಗೇಶ್ ನಿರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಂಡವಪುರ ಸಕ್ಕರೆ ಕಾರ್ಖಾನೆ 40 ವರ್ಷಗಳ ಕಾಲ ನಿರಾಣಿ ತೆಕ್ಕೆಗೆ - ಮುರುಗೇಶ್ ನಿರಾಣಿ
ಸರ್ಕಾರದ ಸಹಕಾರ ಒಡೆತನದಲ್ಲಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಉದ್ಯಮ ಸಮೂಹ ಲೀಜ್‌ಗೆ ಪಡೆದಿದ್ದು, ಇನ್ನು 40 ವರ್ಷಗಳ ಕಾಲ ನಿರಾಣಿ ಉದ್ಯಮ ಸಮೂಹವೇ ಕಾರ್ಖಾನೆ ಒಡೆತನ ಹೊಂದಲಿದೆ.
40 ವರ್ಷಗಳ ಅವಧಿಗೆ 405 ಕೋಟಿ ರೂ. ಬಿಡ್ ಮಾಡಿದ ನಿರಾಣಿ ಗ್ರೂಪ್ ಕಾರ್ಖಾನೆಯನ್ನು ತನ್ನದಾಗಿಸಿಕೊಂಡಿದೆ. ಇಲ್ಲಿಯವರೆಗೆ 9 ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು 30 ವರ್ಷಗಳ ಅವಧಿಗೆ ಗುತ್ತಿಗೆಗೆ ಕೊಟ್ಟಿರುವುದರಲ್ಲಿ ಅತಿ ಕಡಿಮೆ 40 ಕೋಟಿ ರೂ.ಯಿಂದ 162 ಕೋಟಿ ರೂ. ಗರಿಷ್ಠ ಬಿಡ್ಗೆ ಕೊಡಲಾಗಿತ್ತು. ಈ ಸಹಕಾರಿ ಕಾರ್ಖಾನೆಗಳ ಬಿಡ್ ಮೊತ್ತ ನಿರಾಣಿ ಗ್ರೂಪ್ನ ಬಿಡ್ಗೆ ಹೋಲಿಸಿದರೇ ಶೇ 250ರಷ್ಟು ಏರಿಕೆ ಆಗಲಿದೆ ಎಂದು ಹೇಳಿದ್ದಾರೆ.
ಸ್ಥಳೀಯವಾಗಿ ನಮ್ಮದೆ ಬ್ಯಾಂಕ್ ಸ್ಥಾಪಿಸುವ ಮೂಲಕ ಆ ಭಾಗದ ರೈತರಿಗೆ ಹೆಚ್ಚಿನ ಅನುಕೂಲತೆ ಮಾಡಿಕೊಡಲಾಗುವುದು. ಗುಣಮಟ್ಟದ ಕಬ್ಬಿನ ಬೀಜ, ಕಡಿಮೆ ದರದಲ್ಲಿ ರಸಗೊಬ್ಬರ, ಕ್ರಿಮಿನಾಶಕ, ರೈತರಿಗೆ ತರಬೇತಿ ಕ್ಯಾಂಪ್ ನೀಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗುತ್ತೇವೆ. ಈ ಭಾಗದ ರೈತರಿಗೆ ಅನುಕೂಲಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಮಂಡ್ಯ ಜಿಲ್ಲೆಗೆ ಇರುವ ಸಕ್ಕರೆ ನಾಡು ಎಂಬ ಹೆಗ್ಗಳಿಕೆಯನ್ನು ಇನ್ನೂ ಹೆಚ್ಚು ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂದು ಅಭಯ ನೀಡಿದರು.