ಬೆಂಗಳೂರು: ಪಂಚಮಸಾಲಿಗೆ 2ಎ ಮೀಸಲಾತಿ ಆಗ್ರಹಿಸಿ ಅಂತಿಮ ಹೋರಾಟದ ಸಿದ್ಧತೆ ಆರಂಭಿಸಿದ್ದು, ಇದಕ್ಕೆ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಮೀಸಲಾತಿ ಸೌಲಭ್ಯ ಕಲ್ಪಿಸಲಿ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಯುವಜನರ ಉದ್ಯೋಗಕ್ಕಾಗಿ ಮೀಸಲಾತಿ ಹೋರಾಟ ಒಂದೇ ಮಾರ್ಗವಾಗಿ ಉಳಿದಿದೆ. ಪಂಚಮಸಾಲಿ, ಗೌಡ ಲಿಂಗಾಯತ, ಮಲೆಗೌಡ, ದೀಕ್ಷ ಲಿಂಗಾಯತರುಗಳಿಗೆ 2ಎ ಹಾಗೂ ಚತುರ್ಥ ಲಿಂಗಾಯತರು ಸೇರಿದಂತೆ ಲಿಂಗಾಯತ ಎಲ್ಲಾ ಒಳಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಹಕ್ಕೊತಾಯಿಸಿ ನಾವು ಪಂಚ ಹಂತದ ಚಳವಳಿ ಆರಂಭಿಸಿದ್ದು, ಕಡೆಯ ಹಂತದ ಹೋರಾಟ ಅಕ್ಟೋಬರ್ 21ರಂದು ಹುಕ್ಕೇರಿಯ ಬೈಪಾಸ್ ರಸ್ತೆ ಸಮೀಪ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಮತ್ತೆ ಬೃಹತ್ ಹೋರಾಟ:ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಬೃಹತ್ ಹೋರಾಟವಾಗಿದ್ದು, ಕನಿಷ್ಠ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಸೇರಿಸುವ ಗುರಿ ಹೊಂದಿದ್ದೇವೆ. ಈ ಹೋರಾಟದ ಸಮಾವೇಶದ ಜೊತೆಗೆ ಒಂದು ಕಿತ್ತೂರು ಕರ್ನಾಟಕ ಮಠದ ಪ್ರಥಮ ರಾಷ್ಟ್ರಮಾತೆ ಚೆನ್ನಮ್ಮನವರ 244ನೇ ಜಯಂತಿ ಹಾಗೂ 199ನೇ ವಿಜಯೋತ್ಸವ ಸಹ ಹಮ್ಮಿಕೊಂಡಿದ್ದೇವೆ. ಈಗಾಗಲೇ ನಾವು ನಾಲ್ಕು ಹಂತಗಳ ಹೋರಾಟ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಸಾರಿಯೂ ಮೀಸಲಾತಿ ನೀಡುವ ಭರವಸೆಯನ್ನು ಮಾತ್ರ ಕೊಟ್ಟಿದ್ದಾರೆ. ಆದರೆ ಈ ಸಂಬಂಧ ಯಾವುದೇ ಘೋಷಣೆ ಮಾಡಿಲ್ಲ.
ಇದು ನಮ್ಮ ಕಡೆಯ ಹಂತದ ಹೋರಾಟವಾಗಿದ್ದು ಅತಿ ದೊಡ್ಡ ಸಂಖ್ಯೆಯಲ್ಲಿ ವಿಧಾನಸೌಧ ಮುಂಭಾಗ ಬೃಹತ್ ಪ್ರತಿಭಟನೆ ಕೈಗೊಳ್ಳುವ ಸಂಬಂಧ ಹುಕ್ಕೇರಿಯ ಸಮಾವೇಶದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. 2ಎ ಮೀಸಲಾತಿ ನೀಡದಿದ್ದರೆ 25 ಲಕ್ಷ ಪಂಚಮಸಾಲಿ ಸಮುದಾಯದ ಜನ ವಿಧಾನಸೌಧದ ಮುಂದೆ ಧರಣಿ ಕೂರಲಾಗುವುದು. ಅದಕ್ಕೂ ಮುನ್ನವೇ ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಮೀಸಲಾತಿ ಸಂಬಂಧ ಸೂಕ್ತ ನಿರ್ಧಾರ ಕೈಗೊಂಡು ಘೋಷಣೆ ಮಾಡಿದರೆ ಉತ್ತಮ ಎಂದರು.
ಬೇಡಿಕೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ:ನಾವು ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ನಮ್ಮ ಬೇಡಿಕೆಗೆ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆ ಆಕ್ರೋಶ ಸಮುದಾಯದಲ್ಲಿದೆ. ಬಿಎಸ್ ವೈ ಅವರು ಸೆಪ್ಟೆಂಬರ್ ಒಳಗೆ ಮೀಸಲಾತಿ ಕೊಡುವ ಭರವಸೆ ನೀಡಿದ್ದರು. ಆದರೆ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರು. ಬಸವರಾಜು ಬೊಮ್ಮಾಯಿ ನಾಲ್ಕುಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಸರ್ವಪಕ್ಷಗಳ ಸಭೆ ಕರೆಯುವುದಾಗಿ ಸಿಎಂ ಸದನದಲ್ಲಿ ಹೇಳಿದ್ದರು. ಆದರೆ ಎಸ್ಸಿ ಎಸ್ಟಿ ಸಮುದಾಯ ಮೀಸಲಾತಿ ಬಗ್ಗೆ ಮಾತ್ರ ಸರ್ವಪಕ್ಷ ಸಭೆ ಕರೆದಿದ್ದಾರೆ.