ಪಂಚಮಸಾಲಿ ಮೀಸಲಾತಿ ವಿಚಾರ: ಸಿಎಂ ನಿವಾಸದೆದುರು ಹೈಡ್ರಾಮ, ಮಹಿಳೆಯರ ಬಂಧನ - ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ್ ಸುದ್ದಿ
10:08 March 08
ಪಂಚಮಸಾಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ನಿವಾಸದ ಮುಂದೆ ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ್ ನೇತೃತ್ವದಲ್ಲಿ ಆಗಮಿಸಿದ ಜನರು ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ವರ್ಗ 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಮಹಿಳಾ ರಾಜ್ಯ ಘಟಕದಿಂದ ಸಿಎಂ ನಿವಾಸದ ಎದುರು ಪ್ರತಿಭಟನೆ ನಡೆಸಲಾಯಿತು. ಬಜೆಟ್ ಮಂಡನೆಗೆ ಸಿದ್ಧವಾಗಿರುವ ಸಿಎಂಗೆ ಬೆಳ್ಳಂಬೆಳಗ್ಗೆ ಪ್ರತಿಭಟನೆ ಬಿಸಿ ತಟ್ಟುವಂತಾಯಿತು.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಏಕಾಏಕಿ ನೂರಾರು ಮಹಿಳೆಯರು ಮೆರವಣಿಗೆ ಮೂಲಕ ಆಗಮಿಸಿದರು. ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ್ ನೇತೃತ್ವದಲ್ಲಿ ಆಗಮಿಸಿದ ಮಹಿಳೆಯರು ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸುವಂತೆ ಘೋಷಣೆ ಕೂಗಿದರು. ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಆದರೆ ಸಿಎಂ ನಿವಾಸದೊಳಗೆ ಪ್ರವೇಶಕ್ಕೆ ಪೊಲೀಸರು ಅನುಮತಿ ನಿರಾಕರಿಸಿದರು. ಈ ವೇಳೆ ಪೊಲೀಸರು ಮತ್ತು ಪಂಚಮಸಾಲಿ ಮಹಿಳಾ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರವೇಶ ನಿರಾಕರಣೆಯಿಂದ ಸಿಎಂ ನಿವಾಸದ ರಸ್ತೆಯಲ್ಲೇ ಧರಣಿ ನಡೆಸಿದರು. ಈ ವೇಳೆ ಕೆಲವರನ್ನು ಪೊಲೀಸರು ಬಂಧಿಸಿದರು. ಪ್ರತಿಭಟನೆಯಿಂದಾಗಿ ಸಿಎಂ ನಿವಾಸಕ್ಕೆ ಪ್ರವೇಶಿಸುವ ಕಾರುಗಳ ಸಂಚಾರಕ್ಕೆ ವ್ಯತ್ಯಯವುಂಟಾಯಿತು.