ಬೆಂಗಳೂರು :ಸರ್ಕಾರದ ಮೀಸಲಾತಿ ಒಪ್ಪಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸ್ಥಗಿತಗೊಳಿಸಿದ್ದಕ್ಕಾಗಿ ಕೂಡಲ ಸಂಗಮಪೀಠದ ಬಸವ ಜಯ ಮೃತ್ಯಂಜಯ ಶ್ರೀಗಳಿಗೆ ಕಾಂಗ್ರೆಸ್ನ ಮೂರ್ನಾಲ್ಕು ನಾಯಕರು ಕರೆ ಮಾಡಿ ನಿಂದನೆ ಮಾಡುತ್ತಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್ ಹಾಗೂ ಶಾಸಕ ಅರವಿಂದ ಬೆಲ್ಲದ್ ಗಂಭೀರ ಆರೋಪ ಮಾಡಿದ್ದಾರೆ. ಕೆಲವರು ಕುಡಿದು ಕರೆ ಮಾಡಿ ಅಗೌರವದಿಂದ ಮಾತನಾಡಿದ್ದಾರೆ. ಈ ಮೂಲಕ ಇಡೀ ಸಮುದಾಯಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ರಾಜಕೀಯಕ್ಕೆ ಮೀಸಲಾತಿ ಅಸ್ತ್ರ ಬಳಸಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು ನಿರಾಶರಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಅರವಿಂದ್ ಬೆಲ್ಲದ ಮತ್ತು ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿಸಿ ಪಾಟೀಲ್ ಹಾಗೂ ಶಾಸಕ ಅರವಿಂದ ಬೆಲ್ಲದ್ ಅವರು, ’’ವೀರಶೈವ ಸಮಾಜ ಎಲ್ಲ ವರ್ಗವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದೆ. ನಮ್ಮ ಹೋರಾಟದ ಮೂಲಕ ಎಲ್ಲರಿಗೂ ಲಾಭವಾಗಿದ್ದು ಖುಷಿ ತಂದಿದೆ. ಆದರೆ, ಹೋರಾಟದಲ್ಲಿ ಭಾವವಹಿಸಿದ್ದ ಕಾಂಗ್ರೆಸ್ನ ಕೆಲ ನಾಯಕರು ಇದೀಗ ಸಂಜೆ, ರಾತ್ರಿ ಎನ್ನದೇ ಕುಡಿದು ಶ್ರೀಗಳಿಗೆ ಕರೆ ಮಾಡಿ ಅಗೌರವದಿಂದ ಮಾತನಾಡಿ ಸಮಾಜಕಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ‘‘ ಎಂದು ಗಂಭೀರವಾಗಿ ಆರೋಪ ಮಾಡಿದರು.
ಈ ವೇಳೆ, ಕರೆ ಮಾಡಿ ಆಗೌರವ ತೊರುತ್ತಿರುವ ನಾಯಕರ ಹೆಸರು ಕೇಳಿದಾಗ, ಕರೆ ಮಾಡುತ್ತಿರುವವರ ಹೆಸರು ಪ್ರಸ್ತಾಪಿಸಲು ಹಿಂದೇಟು ಹಾಕಿದ ಸಿಸಿ ಪಾಟೀಲ್ ಹಾಗೂ ಅರವಿಂದ ಬೆಲ್ಲದ್, ಹೋರಾಟದಲ್ಲಿ ಭಾಗಿಯಾದ ಕಾಂಗ್ರೆಸ್ ಪಕ್ಷದ ನಾಯಕರು ಕರೆ ಮಾಡಿ ಕಿರುಕುಳ ಕೊಡುತ್ತಿದ್ದಾರೆ. ನಾವು ಹೆಸರು ಹೇಳಲ್ಲ , ನಿಮಗೆ ಎಲ್ಲ ಗೊತ್ತಿದೆ. ಭಾಗವಹಿಸಿದ ಮೂರು ನಾಲ್ಕು ಪ್ರಮುಖರು ಕರೆ ಮಾಡಿ ನೋಯಿಸುತ್ತಿದ್ದಾರೆ ಎಂದಷ್ಟೇ ಹೇಳಿದರು.
ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಮೀಸಲಾತಿ ವಿರೋಧ :ಇನ್ನು ಇದೇ ಸಂದರ್ಭ ಮಾತನಾಡಿದ ಸಿಸಿ ಪಾಟೀಲ್, ’’ನಮ್ಮ ಮೀಸಲಾತಿ ಹೋರಾಟದ ವೇಳೆ ಸರ್ಕಾರ ಮೀಸಲಾತಿ ವಿಚಾರದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿತು. ಹೊಸದಾಗಿ ಪ್ರವರ್ಗ 2ಡಿ ಮತ್ತು 2ಸಿ ಫಾರ್ಮುಲಾವನ್ನು ಸಿಎಂ ತಂದರು. ಈ ವೇಳೆ ಶ್ರೀಗಳು ಪಾದಯಾತ್ರೆಯಲ್ಲಿದ್ದು, ನಾನೇ ಅವರನ್ನು ಬೆಳಗಾವಿಗೆ ಸಮೀಪ ಸ್ವಾಗತಿಸಿದ್ದೆ. ಅಂದು ಮೀಸಲಾತಿ ವಿಚಾರದಲ್ಲಿ ಸ್ಪಷ್ಟತೆ ಇರಲಿಲ್ಲ. 2ಎ ಹೋರಾಟಕ್ಕೆ 2ಡಿ ಮಾಡಿದ್ದಾರೆ. ಆದರೆ ಹೆಸರು ಏನೇ ಇರಲಿ 2ಎ ಮೀಸಲಾತಿ ಸೌಲಭ್ಯ ಸಿಗಲಿದೆ ಎನ್ನುವ ಕಾರಣಕ್ಕೆ ಶ್ರೀಗಳ ಸಮ್ಮುಖದಲ್ಲಿ ನಾವು ಕಾಂಗ್ರೆಸ್ ನವರು ಸೇರಿ ಹೋರಾಟದಲ್ಲಿದ್ದ ಎಲ್ಲರೂ ಒಪ್ಪಿಕೊಂಡಿದ್ದರು. ಈಗ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಮೀಸಲಾತಿ ವಿಚಾರಕ್ಕೆ ವಿರೋಧ ಮಾಡುತ್ತಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಇದನ್ನೇ ಇರಿಸಿಕೊಂಡು ಚುನಾವಣೆಗೆ ಹೋಗೋಣ ಎನ್ನುವ ಲೆಕ್ಕಾಚಾರದಲ್ಲಿದ್ದರು. ಆದರೆ, ಮೀಸಲಾತಿ ಕೊಟ್ಟಿದ್ದೇವೆ ಇದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ‘‘ ಎಂದು ಟೀಕಿಸಿದರು.