ಬೆಂಗಳೂರು:ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿರ್ದೇಶನ ನೀಡುವಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪಂಚಮಸಾಲಿ ಪೀಠದ ಬಸವ ಜಯಮೃತ್ಯಂಜಯ ಶ್ರೀಗಳು ಮನವಿ ಮಾಡಿದ್ದಾರೆ.
ಕುಮಾರಕೃಪಾ ಅತಿಥಿಗೃಹಕ್ಕೆ ತೆರಳಿದ ಶ್ರೀಗಳು, ಬಿಜೆಪಿ ರಾಜ್ಯ ಉಸ್ತುವಾರಿಯನ್ನು ಭೇಟಿ ಮಾಡಿದರು. ಹಸಿರು ಶಾಲು ಹೊದಿಸಿ ರಾಜ್ಯ ಉಸ್ತುವಾರಿಯನ್ನು ಸನ್ಮಾನಿಸಿ ಗೌರವಿಸಿದರು. ನಂತರ ಮೀಸಲಾತಿ ವಿಷಯದ ಕುರಿತು ಚರ್ಚೆ ನಡೆಸಿದರು.
ಓದಿ: ಉಪ ಚುನಾವಣೆಗೆ ಕೇಂದ್ರ ಚುನಾವಣಾ ಸಮಿತಿಯಿಂದ ಹೆಸರು ಪ್ರಕಟ : ಅರುಣ್ ಸಿಂಗ್
ಇತ್ತೀಚೆಗೆ ನಡೆಸಿದ ಪಾದಯಾತ್ರೆ, ಧರಣಿ ಸತ್ಯಾಗ್ರಹವನ್ನು ವಿವರಿಸಿ ಸರ್ಕಾರ ನೀಡಿರುವ ಭರವಸೆಯನ್ನು ಪ್ರಸ್ತಾಪಿಸಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಯಡಿಯೂರಪ್ಪ ಅವರಿಗೆ ನಿರ್ದೇಶನ ನೀಡಬೇಕು. ಕೇಂದ್ರಕ್ಕೆ ರಾಜ್ಯದಿಂದ ಶಿಫಾರಸು ಬಂದಾಗ ವಿಳಂಬ ಮಾಡದೇ ಕ್ರಮ ಕೈಗೊಳ್ಳಲು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಮನವಿ ಆಲಿಸಿದ ಅರುಣ್ ಸಿಂಗ್, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎನ್ನುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.