ಬೆಂಗಳೂರು:ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರದ ಬೆಂಬಲವಿದೆ. ನಿಮ್ಮ ಬೇಡಿಕೆಯ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿ ಬೇಡಿಕೆ ಈಡೇರಿಸಲು ಸರ್ಕಾರದ ಸಚಿವರು, ಶಾಸಕರು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇವೆ ಎಂದು ಸರ್ಕಾರದ ಪ್ರತಿನಿಧಿಗಳಾಗಿ ಬಂದಿದ್ದ ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ ಭರವಸೆ ನೀಡಿದರು.
ನಗರದ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ನಡೆದ ಸಮಾವೇಶದಲ್ಲಿ ಸರ್ಕಾರದ ಪರವಾಗಿ ಭಾಗಿಯಾಗಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವ ಬೇಡಿಕೆ ಇಟ್ಟು ಶ್ರೀಗಳು ಬಹಳ ಶ್ರಮ ವಹಿಸಿ ಪಾದಯಾತ್ರೆ ನಡೆಸಿದ್ದಾರೆ. ಐತಿಹಾಸಿಕ ದಿಟ್ಟ ನಿಲುವು ತಳೆದು ಪಾದಯಾತ್ರೆ ನಡೆಸಿದ್ದಾರೆ. ಸುದೀರ್ಘ ಪಾದಯಾತ್ರೆ ವೇಳೆ ಅವರ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಆಗಲಿಲ್ಲ. ಇದು ದೈವ ಇಚ್ಛೆಯಾಗಿದೆ. ದೈವದ ಬಲವೂ ಅವರಿಗಿದೆ ಎಂದರು.
ರಾಜ್ಯದಲ್ಲಿ ಹಲವಾರು ಮುಖ್ಯಮಂತ್ರಿಗಳು, ಹಲವಾರು ಸರ್ಕಾರ ಬಂದು ಹೋಗಿವೆ. ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವ ಹಕ್ಕು ಕೊಡಿಸುವ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲಲಿದೆ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ 3ಬಿ ಕಲ್ಪಿಸಿದ್ದರಿಂದ ಇಂದು ನಾವು 2ಎ ಹಕ್ಕು ಕೇಳಲು ವೇದಿಕೆ ಸಿಕ್ಕಿದೆ. ಈಗ ಸಿಎಂ ಯಡಿಯೂರಪ್ಪ ಅಧ್ಯಯನ ವರದಿ ಸಲ್ಲಿಸಲು ಹಿಂದುಳಿದ ವರ್ಗದ ಆಯೋಗಕ್ಕೆ ಆದೇಶ ನೀಡಿದ್ದಾರೆ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ಕೆಲ ಕಾನೂನು ಕಟ್ಟುಪಾಡು ದಾಟಬೇಕಿದೆ. ಇಂದು ಏಕಾಏಕಿ ಕೊಟ್ಟರೆ ಬೇರೆ ಸಮುದಾಯದವರು ಕೋರ್ಟ್ಗೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಸಿಎಂ ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಿ ಅಧ್ಯಯನ ವರದಿ ನೀಡಲು ಸೂಚಿಸಿದ್ದಾರೆ. ಇಂದಿನ ಬೇಡಿಕೆಯನ್ನು ಸಿಎಂಗೆ ತಲುಪಿಸಲಿದ್ದೇವೆ. ಸರ್ಕಾರ ಬೇಡಿಕೆಗೆ ಪೂರಕವಾಗಿ ನಡೆದುಕೊಳ್ಳಲಿದೆ. ಬೇಡಿಕೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಕೃಷಿ ಕಾಯ್ದೆ, ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಪಾಠ ಮಾಡಿದ ನಿವೃತ್ತ ನ್ಯಾ. ನಾಗಮೋಹನ್ ದಾಸ್
ನಂತರ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಉಭಯ ಶ್ರೀಗಳು 2ಎ ಮೀಸಲಾತಿಗಾಗಿ ಹೋರಾಟ ಆರಂಭಿಸಿದ್ದಾರೆ. ಉದ್ಯೋಗ, ಶಿಕ್ಷಣ ಎಲ್ಲದರಲ್ಲೂ ಸಮುದಾಯ ಮುಂದೆ ಬರಲು ಹೋರಾಟ ಆರಂಭಿಸಿದ್ದಾರೆ. ಈ ಹೋರಾಟಕ್ಕೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ಕೊಡಲಿದೆ. 2008ರಲ್ಲಿ ಯಡಿಯೂರಪ್ಪ ಸಿಎಂ ಇದ್ದಾಗ 2ಎ ಮೀಸಲು ಬೇಡಿಕೆ ಬಂದಾಗ ಸಂಪುಟ ಉಪ ಸಮಿತಿ ರಚಿಸಿದ್ದರು. ಅಂದು ಕಾನೂನು ತೊಡಕು ಬಂದಾಗ 3ಬಿಗೆ ಬಂತು. ಈಗ 2ಎ ಬೇಡಿಕೆ ಕುರಿತು ಅಧ್ಯಯನ ವರದಿಗೆ ಸೂಚಿಸಿದ್ದಾರೆ. 2ಎ ಕೊಡಿಸಲು ನಾವೆಲ್ಲಾ ಶ್ರಮಿಸುತ್ತಿದ್ದೇವೆ. ಸಮಾಧಾನದಿಂದ ಇರಿ. ಸಚಿವರು, ಶಾಸಕರು ಪ್ರಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದರು.