ಬೆಂಗಳೂರು:ರಾಜ್ಯದ ಲಿಂಗಾಯತ ಸಮುದಾಯದಲ್ಲಿ ಅತಿ ಹೆಚ್ಚು ಜನಸಂಖ್ಯೆ (ಅಂದಾಜು 75 ಲಕ್ಷ ) ಇರುವ ಪಂಚಮಸಾಲಿ ಒಳಪಂಗಡವನ್ನು 2ಎ ಮೀಸಲಾತಿ ಸೌಲಭ್ಯಕ್ಕೆ ಒಳಪಡಿಸುವುದರಿಂದ ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ಮತ್ತು ಶಾಲಾ ಕಾಲೇಜುಗಳ ಪ್ರವೇಶಾತಿಯಲ್ಲಿ ಒಂದಲ್ಲ "ಡಬಲ್ " ಬಂಪರ್ ಲಾಭ ದೊರೆಯಲಿದೆ.
ಕೇಂದ್ರದ ಒಬಿಸಿಗೂ ಅರ್ಹತೆ:ಲಿಂಗಾಯತ ಪಂಚಮಸಾಲಿಗಳಿಗೆ 2 ಎ ಮೀಸಲಾತಿ ಘೋಷಣೆಯಿಂದ ರಾಜ್ಯ ಸರ್ಕಾರದ ನೇಮಕಾತಿ ಮತ್ತು ಶಿಕ್ಷಣ ಪ್ರವೇಶಾತಿ ಮಾತ್ರವಲ್ಲ. ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಲು ಅರ್ಹತೆ ದೊರೆತು ಎರಡೂ ಸರ್ಕಾರ ಮೀಸಲಾತಿ ಸೌಲಭ್ಯಗಳ ಪ್ರಯೋಜನ ಲಭ್ಯವಾಗಲಿದೆ.
ಎರಡು ಸರ್ಕಾರದಲ್ಲೂ ಯೋಜನೆ ಲಾಭ: ರಾಜ್ಯದಲ್ಲಿ ಪಂಚಮಸಾಲಿಗಳನ್ನು 2 ಎ ಮೀಸಲಾತಿ ಸೌಲಭ್ಯಕ್ಕೆ ಒಳಪಡಿಸುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರಲ್ಲೂ ಉದ್ಯೋಗ ನೇಮಕಾತಿ ಮತ್ತು ಶಿಕ್ಷಣ ಕ್ಷೇತ್ರದ ಪ್ರವೇಶಾತಿಗಳಲ್ಲಿ ಮೀಸಲಾತಿ ಅನುಕೂಲತೆಗಳು ದೊರೆತು ಸಮುದಾಯದ ಯುವಕ ಯುವತಿಯರಿಗೆ ಹೆಚ್ಚಿನ ಲಾಭ ಸಿಗಲಿದೆ.
ಪಂಚಮಸಾಲಿ ಒಳಪಂಗಡಕ್ಕೆ ರಾಜ್ಯದಲ್ಲಿ ಸದ್ಯ 3ಬಿ ( ಹಿಂದುಳಿದ ವರ್ಗ) ಮೀಸಲಾತಿ ಇದೆ. ಈ ಕೆಟಗರಿಯ ಮೀಸಲಾತಿಯಿಂದ ಹೆಚ್ಚಿನ ಅನುಕೂಲತೆಗಳು ದೊರೆಯುತ್ತಿಲ್ಲ. 3ಬಿ ಕೆಟಗರಿಗೆ ಶೇಕಡ 5ರಷ್ಟು ಮೀಸಲಾತಿ ಮಾತ್ರ ನಿಗದಿಪಡಿಸಲಾಗಿದ್ದು ಅದರಲ್ಲಿನ ಇನ್ನುಳಿದ ಜಾತಿಗಳ ಜತೆಗೆ ಶೇಕಡ 5 ರಷ್ಟು ಮೀಸಲಾತಿ ಹಂಚಿಕೊಂಡರೆ ಮೀಸಲಾತಿ ಸೌಲಭ್ಯ ಒಂದು ರೀತಿ ಕೈಗೆಟುಕದಂತೆಯೇ ಆಗಿದೆ.
ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ 15 ರಷ್ಟು ಮೀಸಲಾತಿ ಸೌಲಭ್ಯ: 3 ಬಿ ಮೀಸಲಾತಿ ಪಟ್ಟಿಯಲ್ಲಿರುವ ಲಿಂಗಾಯತ ಪಂಚಮಸಾಲಿ ಒಳಪಂಗಡಕ್ಕೆ 2ಎ ಮೀಸಲಾತಿ ಸೌಲಭ್ಯ ನೀಡಬೇಕೆಂದು ಹೋರಾಟ ನಡೆಸಲಾಗುತ್ತಿದೆ. 2ಎ ಕೆಟಗರಿಗೆ ಪಂಚಮಸಾಲಿ ಒಳಪಂಗಡ ಸೇರಿಸುವುದರಿಂದ ಸದ್ಯ 3ಬಿ ನಲ್ಲಿ ಶೇ.5 ರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಪಂಚಮಸಾಲಿಗಳಿಗೆ 2ಎ ನಲ್ಲಿ ಶೇಕಡ 15 ರಷ್ಟು ಮೀಸಲಾತಿ ಸೌಲಭ್ಯಗಳು ದೊರಕಲಿವೆ.
2ಎ ಕೆಟಗರಿಯಲ್ಲಿ ಶೇಕಡ 15 ರಷ್ಟು ಮೀಸಲು ಸೌಲಭ್ಯ ಇರುವುದರಿಂದ ಹೆಚ್ವಿನ ಅನುಕೂಲಗಳು ಪಂಚಮಸಾಲಿ ಒಳಪಂಗಡಕ್ಕೆ ದೊರೆಯಲಿವೆ ಎನ್ನುವುದು ಮೀಸಲಾತಿ ಹೋರಾಟಗಾರರ ವಾದ. 2ಎ ನಲ್ಲಿ ಈಗಾಗಲೇ ಶೇ.15 ರಷ್ಟು ಮೀಸಲಾತಿಗೆ 102 ಜಾತಿಗಳನ್ನು ಸೇರಿಸಲಾಗಿದ್ದು ಹೆಚ್ಚಿನ ಜನಸಂಖ್ಯೆಯ ಪಂಚಮಸಾಲಿ ಲಿಂಗಾಯತರ ಸೇರ್ಪಡೆಯಿಂದ ಕುರುಬ ಸೇರಿದಂತೆ ಉಳಿದ ಇತರ ಜಾತಿಗಳಿಗೆ ಅನ್ಯಾಯವಾಗಲಿದೆ ಎನ್ನುವುದು ಮುಖ್ಯಮಂತ್ರಿಗಳಿಗೆ ಮೊನ್ನೆಯಷ್ಟೇ ಮಧ್ಯಂತರ ವರದಿ ಸಲ್ಲಿಕೆ ಮಾಡಿರುವ ಹಿಂದುಳಿದ ವರ್ಗಗಳ ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಬೃಹತ್ ಪ್ರಮಾಣದ ಹೋರಾಟ: ಲಿಂಗಾಯತ ಸಮುದಾಯದಲ್ಲೇ ಅತಿ ದೊಡ್ಡ ಒಳಪಂಗಡವಾಗಿರುವ ಪಂಚಮಸಾಲಿಗಳಿಗೆ 2 ಎ ಪ್ರವರ್ಗಕ್ಕೆ ಸೇರಿಸಿ ಮೀಸಲು ಸೌಲಭ್ಯ ನೀಡುವಂತೆ ಪಂಚಮಸಾಲಿಗಳು ಬೃಹತ್ ಪ್ರಮಾಣದ ಹೋರಾಟವನ್ನು ಅನಾದಿ ಕಾಲದಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಪಂಚಮಸಾಲಿ ಸಮುದಾಯದವರು ಈಗಿರುವ ಮೀಸಲಾತಿ ಪ್ರವರ್ಗ 3ಬಿ ಯಿಂದ 2ಎ ಗೆ ಸೇರಿಸಬೇಕೆಂದು ರಾಜ್ಯದ ಹಲವೆಡೆ ಸಮಾವೇಶ, ಪಾದಯಾತ್ರೆ, ಸಭೆಗಳನ್ನು ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದ್ದಾರೆ. ಸರ್ಕಾರಿ ಉದ್ಯೋಗ ನೇಮಕಾತಿ, ಶಾಲಾ - ಕಾಲೇಜುಗಳ ಪ್ರವೇಶಾತಿಯಲ್ಲಿ ಪಂಚಮಸಾಲಿ ಯುವಕ, ಯುವತಿಯರಿಗೆ ಅನ್ಯಾಯ ಆಗುತ್ತಿದೆ.
ಕೃಷಿ ನಂಬಿದ ಪಂಚಮಸಾಲಿಗಳು:ಮೂಲತಃ ಕೃಷಿಕರಾಗಿರುವ ಪಂಚಮಸಾಲಿಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆನ್ನುವುದು ಹೋರಾಟಗಾರರ ವಾದವಾಗಿದೆ. ಸುಮಾರು 34 ವೀರಶೈವ ಲಿಂಗಾಯತ ಒಳಪಂಗಡಗಳು ಈಗಾಗಲೇ 2ಎ ಮೀಸಲಾತಿ ಹಕ್ಕನ್ನು ಅನುಭವಿಸುತ್ತಿವೆ. ಆದರೆ ಕೃಷಿಕರಾಗಿರುವ ಪಂಚಮಸಾಲಿಗಳಿಗೆ ಮೀಸಲಾತಿ ಸೌಲಭ್ಯ ದಕ್ಕದಂತಾಗಿದೆ. ಜನಾಂಗದವರ ಭವಿಷ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಹಾಗಾಗಿ ಮೀಸಲಾತಿ ನೀಡಲೇಬೇಕೆಂದು ಪಂಚಮಸಾಲಿಗಳು ಬಿಗಿ ಪಟ್ಟು ಹಿಡಿದು ಬೀದಿಯಲ್ಲಿ ಹೋರಾಟಕ್ಕಿಳಿದು ಸರ್ಕಾರಕ್ಕೇ ಮೇಲಿಂದ ಮೇಲೆ ಗಡುವು ನೀಡತೊಡಗಿದ್ದಾರೆ.
ಬೊಮ್ಮಾಯಿ ಸರ್ಕಾರಕ್ಕೆ ಬಿಸಿ:ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ ಪಂಚಮಸಾಲಿಗಳ ಮೀಸಲಾತಿ ಹೋರಾಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಪಂಚಮಸಾಲಿಗಳ ಬೇಡಿಕೆಯಂತೆ 2ಎ ಗೆ ಸೇರಿಸಿದರೆ ಉಳಿದ ಜಾತಿಯವರೂ ಹೋರಾಟ ನಡೆಸುವ ಎಚ್ಚರಿಕೆಯನ್ನು ಈಗಾಗಲೇ ನೀಡಿದ್ದರಿಂದ ಮುಖ್ಯಮಂತ್ರಿ ಬೊಮ್ಮಾಯಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ವೀರಶೈವ ಮಹಾಸಭಾದ ಬೇಡಿಕೆ.. ಪಂಚಮಸಾಲಿಗಳ ಮೀಸಲಾತಿ ಹೋರಾಟದ ನಡುವೆ " ಅಖಿಲ ಭಾರತ ವೀರಶೈವ ಮಹಾಸಭಾ " ಪಂಚಮಸಾಲಿಗಳಿಗೆ ಮಾತ್ರವಲ್ಲ, ವೀರಶೈವ ಲಿಂಗಾಯತ ಈಡೀ ಸಮುದಾಯಕ್ಕೆ 2 ಎ ಮೀಸಲಾತಿ ಸೌಲಭ್ಯ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲು ಫೆಬ್ರವರಿ ತಿಂಗಳು ದಾವಣಗೆರೆಯಲ್ಲಿ ವೀರಶೈವ ಮಹಾಸಭಾದಿಂದ ಬೃಹತ್ ಸಮಾವೇಶ ನಡೆಸಲಾಗುತ್ತಿದೆ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ರೇಣುಕ ಪ್ರಸಾದ್ "ಈಟಿವಿ ಭಾರತ"ಕ್ಕೆ ತಿಳಿಸಿದ್ದಾರೆ.
ಇದನ್ನೂಓದಿ:ನಮ್ಮ ಸಮಾಜಕ್ಕೆ ಬೆಂಬಲವಾಗಿ ನಿಂತವರಿಗೆ ನೀವು ಮತ ಹಾಕಿ: ಜಯಮೃತ್ಯುಂಜಯ ಸ್ವಾಮೀಜಿ ಕರೆ