ಬೆಂಗಳೂರು:ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಸಂಬಂಧಿಸಿದಂತೆ ನಾಳೆಯಿಂದ ಮತ್ತೆ ಹೋರಾಟ ಆರಂಭವಾಗಲಿದೆ ಎಂದು ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಶ್ರೀ ಹೇಳಿದ್ದಾರೆ.
‘ನಾಳೆಯಿಂದ ಮತ್ತೆ ಮೀಸಲಾತಿ ಹೋರಾಟ’
ನಗರದ ಬಸವೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಸಂಬಂಧ ಈಗಾಗಲೇ ಹೋರಾಟ ನಡೆದಿದೆ. ಪಾದಯಾತ್ರೆಯನ್ನೂ ಮಾಡಿದ್ದೇವೆ. ಅಧಿವೇಶನದಲ್ಲಿ ಅಂದಿನ ಸಿಎಂ ಆರು ತಿಂಗಳೊಳಗೆ ಬೇಡಿಕೆ ಈಡೇರಿಸುವ ಮಾತು ಕೊಟ್ಟಿದ್ದರು. ಅವರು ಮಾತು ಕೊಟ್ಟು ಸೆಪ್ಟೆಂಬರ್ 15 ಕ್ಕೆ ಆರು ತಿಂಗಳಾಗಲಿದ್ದು, ಕೊಟ್ಟ ಗಡುವು ಮುಗಿಯುತ್ತದೆ. ಹೀಗಾಗಿ ನಾವು ನಾಳೆಯಿಂದ ಮತ್ತೆ ಹೋರಾಟ ಆರಂಭಿಸುತ್ತೇವೆ. ಪ್ರತಿಜ್ಞಾ ಪಂಚಾಯತ್ ಹೆಸರಲ್ಲಿ ಮಲೆ ಮಹದೇಶ್ವರ ಬೆಟ್ಟದಿಂದ ಅಭಿಯಾನ ಶುರು ಮಾಡುತ್ತೇವೆ ಎಂದರು.
‘ನಮ್ಮ ಹೋರಾಟವನ್ನು ಬಿಎಸ್ವೈ ಅರ್ಥ ಮಾಡಿಕೊಳ್ಳಲಿಲ್ಲ’
ಸೆಪ್ಟಂಬರ್ 30 ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಫ್ರೀಡಂಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಸುತ್ತೇವೆ. ಓಬಿಸಿ ಆಯೋಗಕ್ಕೆ ವರದಿ ಸಲ್ಲಿಸಲು ಸರ್ಕಾರ ಸೂಚಿಸಿದೆ. ವರದಿ ಬಂದ ಕೂಡಲೇ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಈ ಹಿಂದೆ ಕೆಲವರು ಬಿಎಸ್ವೈಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ, ಅವರು ನಮ್ಮ ಹೋರಾಟವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಆದರೆ, ಈಗಿನ ಸಿಎಂ ನಮ್ಮ ಭರವಸೆ ಈಡೇರಿಸುವ ವಿಶ್ವಾಸವಿದೆ. ಮೊನ್ನೆ ಸಿಎಂ ನಮ್ಮನ್ನು ಭೇಟಿ ಮಾಡಿ, ನನ್ನ ಮಾತಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.
‘ನಮ್ಮ ಸಮುದಾಯಕ್ಕೆ ಖಂಡಿತ ನ್ಯಾಯ ಸಿಗಲಿದೆ’