ಬೆಂಗಳೂರು :ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಶಂಕರ್ ಪಾಟೀಲ್ ಮುನೇನಕೊಪ್ಪ ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ. ಜೆಡಿಎಸ್ನ ಎನ್ ಹೆಚ್ ಕೋನರೆಡ್ಡಿ ವಿರುದ್ಧ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿರುವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು, 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, 2013ರ ವಿಧಾನಸಭೆ ಚುನಾವಣೆಯಲ್ಲಿ ಕೋನರೆಡ್ಡಿ ವಿರುದ್ಧ ಸೋಲುಂಡಿದ್ದರು.
ಮೂಲತಃ ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ರಾಜಕೀಯವಾಗಿಯೂ ಹೊಸಬರಲ್ಲ. ಇವರ ತಾತ ಸಹ ರಾಜಕೀಯದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಆದರೆ, ಇವರ ತಂದೆ ರಾಜಕೀಯಕ್ಕೆ ಬರದೆ ಕೃಷಿ ಚಟುವಟಿಕೆಗೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡಿದ್ದರು. ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದ ಇವರು, ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿ ಕಬ್ಬಡ್ಡಿ ಕ್ರೀಡಾಪಟುವಾಗಿ ಜನಪ್ರಿಯತೆ ಪಡೆದಿದ್ದರು.
1989ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ ಶಂಕರ್ ಪಾಟೀಲ್, ಅಂದಿನ ಜನತಾದಳ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲವರ್ಷ ಕಾರ್ಯನಿರ್ವಹಿಸಿದರು. 2008 ರವರೆಗೂ ಜನತಾದಳದ ವಿವಿಧ ಹುದ್ದೆ ಅಲಂಕರಿಸಿದರು.