ಬೆಂಗಳೂರು:ಕಾಂಗ್ರೆಸ್ ಪಕ್ಷದ ಮಹಿಳಾ ಶಕ್ತಿ ಪ್ರದರ್ಶನ ಸೋಮವಾರ ನಡೆಯಲಿದ್ದು, ಸಮಾರಂಭದಲ್ಲಿ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಾಲ್ಗೊಳ್ಳುತ್ತಿದ್ದಾರೆ. ಕೆಪಿಸಿಸಿಯಿಂದ ನಾ ನಾಯಕಿ ಸಮಾವೇಶ ಇಂದು ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ಆಯೋಜನೆಗೊಂಡಿದೆ.
ನಾ ನಾಯಕಿ ಹೆಸರಲ್ಲಿ ನಡೆಯಲಿರುವ ಈ ಮಹಿಳಾ ಸಮಾವೇಶಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಗಮಿಸುತ್ತಿರುವುದು ವಿಶೇಷವಾಗಿದೆ. ಸೋಮವಾರ 16 ರಂದು ಮಧ್ಯಾಹ್ನ 12 ಕ್ಕೆ ನಡೆಯಲಿರೋ ಸಮಾವೇಶದಲ್ಲಿ ಒಂದು ಲಕ್ಷ ಮಹಿಳೆಯರು ಭಾಗಿಯಾಗುವ ನಿರೀಕ್ಷೆ ಇದೆ. ಮತ್ತೊಂದು ವಿಶೇಷವೆನೆಂದರೆ ಕೆಪಿಸಿಸಿ ಮಹಿಳಾ ಘಟಕದಿಂದ ನಾ ನಾಯಕಿ ಸಮಾವೇಶ ಆಯೋಜನೆಗೊಂಡಿದೆ.
ಈ ಸಮಾವೇಶದಲ್ಲಿ ರಾಜ್ಯ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆ.
ಸಿದ್ಧತಾ ಸಭೆ:ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ ನಡೆದಿದೆ. ಸಭೆಯಲ್ಲಿ ನಾ ನಾಯಕಿ ಸಮಾವೇಶದ ಅಧ್ಯಕ್ಷೆ ಉಮಾಶ್ರಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮನಾಥ್ ಮತ್ತಿತರ ನಾಯಕಿಯರು ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆದಿದೆ.
ನಾ ನಾಯಕಿ ಕಾರ್ಯದ ಕುರಿತು ಯಾರಿಗೆ ಯಾವ ಜವಾಬ್ದಾರಿ ನೀಡುವುದು, ಮೇಲುಸ್ತುವಾರಿ ಯಾರಿಗೆ ವಹಿಸುವುದು, ಎಲ್ಲಿಯೂ ಆಯೋಜನೆಯಲ್ಲಿ ಲೋಪ ಆಗದಂತೆ ಹೇಗೆ ನೋಡಿಕೊಳ್ಳಬೇಕು ಎಂಬ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕರ್ತರನ್ನು ಕರೆತರುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು, ಅರಮನೆ ಮೈದಾನಕ್ಕೆ ಆಗಮಿಸಿ, ತೆರಳುವವರೆಗೂ ಮಹಿಳಾ ಕಾರ್ಯಕರ್ತರ ಜವಾಬ್ದಾರಿ ನೋಡಿಕೊಳ್ಳುವುದು, ವೇದಿಕೆ ಮೇಲೆ, ಮುಂಭಾಗ, ಅರಮನೆ ಮೈದಾನ ಪ್ರವೇಶದ್ವಾರ, ಗಣ್ಯರನ್ನು ಬರಮಾಡಿಕೊಳ್ಳುವುದು, ಉತ್ತಮ ಆಸನ ವ್ಯವಸ್ಥೆ ಸೇರಿದಂತೆ ಒಂದೊಂದು ಜವಾಬ್ದಾರಿಯನ್ನೂ ಒಂದಿಷ್ಟು ಮಂದಿಗೆ ವಹಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.