ಬೆಂಗಳೂರು: ಪಾಕಿಸ್ತಾನ ಮಾದರಿ ಧ್ವಜವನ್ನು ಕಾರಿನ ಮುಂಭಾಗದಲ್ಲಿ ಅಳವಡಿಸಿಕೊಂಡು ಹೋಗುತ್ತಿದ್ದ ಚಾಲಕನಿಗೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಕಾರಿನ ಮುಂಭಾಗದಲ್ಲಿ ಪಾಕ್ ಮಾದರಿ ಧ್ವಜ ಹಾಕಿಕೊಂಡು ತಿರುಗಾಡಿದ ಚಾಲಕ... ಪೊಲೀಸರಿಂದ ಕ್ಲಾಸ್!
ಪಾಕ್ ಮಾದರಿ ಧ್ವಜವನ್ನು ಕಾರಿನ ಮುಂಭಾಗದಲ್ಲಿ ಸಿಕ್ಕಿಸಿಕೊಂಡು, ಸಂಚರಿಸುತ್ತಿದ್ದ ತಮಿಳು ಮೂಲದ ಕಾರು ಚಾಲಕನಿಗೆ ಪೊಲೀಸರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ.
ಸೆ.8ರಂದು ಬೆಳಗ್ಗೆ 11.45ರ ಸುಮಾರಿಗೆ ಹೊಸೂರು ರಸ್ತೆಯ ವೀರಸಂದ್ರ ವೃತ್ತದಲ್ಲಿ ತಮಿಳುನಾಡು ಮೂಲದ ಫಾರ್ಚುನರ್ ಕಾರು ನಿಂತಿತ್ತು. ಪಾಕಿಸ್ತಾನ ರಾಷ್ಟ್ರಧ್ವಜಕ್ಕೆ ಹೋಲುವ ಭಾವುಟ ಅಳವಡಿಸಿರುವುದು ಸಿಬ್ಬಂದಿ ಗಮನಕ್ಕೆ ಬಂದಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಎಎಸ್‌ಐ ರಾಜು ಅವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಹಸಿರು ಬಣ್ಣದ ಭಾವುಟ ಕಂಡು ಬಂದಿದೆ.
ಈ ವೇಳೆ ಚಾಲಕನನ್ನು ಕಾರಿನಿಂದ ಕೆಳಗಿಳಿಸಿ, ಆತನ ಕೈಯಿಂದ ಭಾವುಟ ತೆಗೆಸಿದ್ದಾರೆ. ಬಳಿಕ ನಮ್ಮ ರಾಷ್ಟ್ರ ಧ್ವಜವನ್ನು ಹಾಕಿಸಿ, ಇನ್ನೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಕಳುಹಿಸಿದ್ದಾರೆ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಸಂಚಾರಿ ಪೊಲೀಸರು ಕಾರು ಮಾಲೀಕನಿಗೆ ಎಚ್ಚರಿಕೆ ಕೂಡ ನೀಡಿದ್ಡಾರೆ. ಸದ್ಯ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.