ಕರ್ನಾಟಕ

karnataka

ETV Bharat / state

ಪಾಕ್​ ಪರ ಘೋಷಣೆ... ವಿದ್ಯಾರ್ಥಿಗಳ ಜೊತೆಗೆ ಸಂಘಟನೆಗಳ ವಿರುದ್ಧವೂ ಕ್ರಮ: ಬೊಮ್ಮಾಯಿ - pak pro slogans latest news

ಪಾಕ್​ ಪರ ಘೋಷಣೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಿನ್ನೆ ಪ್ರತಿಭಟನಾ ಸಮಾವೇಶ ಆಯೋಜಿಸಿದ್ದ ಸಂಘಟಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ ದೇಶದ್ರೋಹಿ ಸಂಘಟನೆಗಳೀಗ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿವೆ ಎಂದು ಸಚಿವರು ಆರೋಪಿಸಿದರು.

Pak pro slogans...Action against students and organizations: Basavaraj Bommai !
ಪಾಕ್​ ಪರ ಘೋಷಣೆ...ವಿದ್ಯಾರ್ಥಿಗಳ ಜೊತೆಗೆ ಸಂಘಟನೆಗಳ ವಿರುದ್ಧವೂ ಕ್ರಮ :ಬಸವರಾಜ ಬೊಮ್ಮಾಯಿ

By

Published : Feb 21, 2020, 6:17 PM IST

ಬೆಂಗಳೂರು: ದೇಶದ್ರೋಹಿ ಸಂಘಟನೆಗಳಿಗೆ ಈಗ ಕಾರ್ಯಕರ್ತರು ಸಿಗುತ್ತಿಲ್ಲ, ಹಾಗಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ, ದೆಹಲಿಯ ಜೆಎನ್​ಯು ಹಾಗೂ ಈಗ ಬೆಂಗಳೂರಿನಲ್ಲೂ ವಿದ್ಯಾರ್ಥಿಗಳೇ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆ. ಹುಬ್ಬಳ್ಳಿ ಘಟನೆಯಲ್ಲಿ ವಿದ್ಯಾರ್ಥಿಗಳಿಗೆ ಜಾಮೀನು ಪಡೆಯಲು ಬಾಂಡ್ ಕೊಟ್ಟವರು ಯಾರು? ಎಂಬುದು ಸಹ ಸದ್ಯದಲ್ಲೇ ಬಹಿರಂಗವಾಗುತ್ತದೆ ಎಂದರು. ಹೈದರಾಬಾದ್​ ಸಂಸದ ಓವೈಸಿ ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕಾ, ಬೇಡವಾ? ಎಂಬ ವಿಷಯವನ್ನು ನಾವು ಮರು ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದರು.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಯಚೂರಿನಲ್ಲಿ ಓವೈಸಿಯವರ ಕಾರ್ಯಕ್ರಮ ನಿಷೇಧಿಸಿದ್ದರು, ಸಂಘಟಕರನ್ನೇ ಬಂಧಿಸಲಾಗಿತ್ತು. ಆದರೆ ನಾವು ಅವಕಾಶ ಕೊಟ್ಟೆವು. ಈ ರೀತಿಯ ಘಟನೆಗಳು ಮರುಕಳಿಸುತ್ತವೆ ಎಂದಾದರೆ ನಾವು ಸಹ ನಮ್ಮ ನಿರ್ಧಾರಗಳನ್ನು ಮರು ಪರಿಶೀಲಿಸಬೇಕಾಗುತ್ತದೆ ಎಂದು ಗೃಹ ಸಚಿವರು ಹೇಳಿದ್ರು.

ಸಿಎಎ ವಿರುದ್ಧದ ಸಮಾವೇಶ ಆಯೋಜಕರ ವಿರುದ್ಧವೂ ಕ್ರಮ: ಗೃಹ ಸಚಿವ ಬಸವರಾಜ್​ ಬೊಮ್ಮಾಯಿ

ಸಂಘಟಕರ ವಿರುದ್ಧವೂ ಕ್ರಮ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಸಂಜೆ ಪ್ರತಿಭಟನೆ ಆಯೋಜಿಸಿದ್ದ ಸಂಘಟಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ ಇದೇ ವೇಳೆ ಸ್ಪಷ್ಟಪಡಿಸಿದ್ರು. ಸಮಾರಂಭದ ವೇದಿಕೆಯಲ್ಲಿ ಬಹಿರಂಗವಾಗಿಯೇ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲು ವಿದ್ಯಾರ್ಥಿನಿಗೆ ಕುಮ್ಮಕ್ಕು ಕೊಟ್ಟವರು ಯಾರೆಂದು ಪ್ರಶ್ನಿಸಿದ ಸಚಿವರು, ಅಮೂಲ್ಯ ಲಿಯೋನಾಳಿಗೆ ಸಂಘಟಕರು ಆಹ್ವಾನ ನೀಡಿದ್ದರೇ? ಅವಳಿಗೆ ಬ್ಯಾಡ್ಜ್ ಹಾಕಿರುವುದು, ಮೈಕ್ ಕೊಟ್ಟಿರುವುದನ್ನು ನೋಡಿದರೆ ಆಯೋಜಕರೇ ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನಿಸಿರಬಹುದು. ಹೀಗಾಗಿ ಆಯೋಜಕರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಇದೊಂದು ಆಕಸ್ಮಿಕ ಘಟನೆ ಎನ್ನಲು ಸಾಧ್ಯವಿಲ್ಲ, ಮೇಲ್ನೋಟಕ್ಕೆ ಪೂರ್ವ ನಿಯೋಜಿತ ದುಷ್ಕೃತ್ಯ ಎಂಬಂತೆ ಕಾಣುತ್ತಿದೆ. ಯಾವ-ಯಾವ ಸಂಘಟನೆಗಳು ಹಾಗೂ ಅದರ ಹಿಂದಿರುವ ಕೈವಾಡಗಳ ಬಗ್ಗೆಯೂ ತನಿಖೆ ಮಾಡುತ್ತೇವೆ. ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಆಯೋಜಕರಿಗೆ ಸೂಚನೆ ನೀಡಬೇಕೆಂದು ಪೊಲೀಸರಿಗೆ ಸಲಹೆ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಷಡ್ಯಂತ್ರ ಕುರಿತಂತೆಯೂ ತನಿಖೆ ನಡೆಸಬೇಕೆಂದು ಸೂಚನೆ ನೀಡಿರುವುದಾಗಿ ಗೃಹ ಸಚಿವರು ತಿಳಿಸಿದರು.

ಇದಕ್ಕೂ ಮುನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿ ಅಮೂಲ್ಯ ಲಿಯೋನಾಳ ಬಂಧನ ಹಾಗೂ ವಿಚಾರಣೆ ಸಂದರ್ಭದಲ್ಲಿ ಆಕೆ ನೀಡಿರುವ ಮಾಹಿತಿ, ಪೊಲೀಸರು ತೆಗೆದುಕೊಂಡಿರುವ ಕಾನೂನು ಕ್ರಮ ಕುರಿತಂತೆ ಪೂರ್ಣ ಮಾಹಿತಿ ಒದಗಿಸಿದರು. ಸುಮಾರು 20 ನಿಮಿಷ ಗೃಹ ಸಚಿವರು ಹಾಗೂ ನಗರ ಪೊಲೀಸ್ ಆಯುಕ್ತರು ಗುಪ್ತವಾಗಿ ಮಾತುಕತೆ ನಡೆಸಿದರು.

ABOUT THE AUTHOR

...view details