ಬೆಂಗಳೂರು :ಮೇಕೆದಾಟು ನೀರಾವರಿ ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಬೆಂಗಳೂರು ನಗರದಲ್ಲಿ ಅರ್ಧ ದಿನವನ್ನು ಪೂರ್ಣಗೊಳಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ನಿಂದ ಆರಂಭವಾದ ಪಾದಯಾತ್ರೆ ಕತ್ರಿಗುಪ್ಪೆ ತಲುಪಿದ್ದು, ಭೋಜನ ವಿರಾಮದ ನಂತರ ಸಂಜೆ 4 ಗಂಟೆಗೆ ಮುಂದಿನ ಸಂಚಾರ ಆರಂಭವಾಗಲಿದೆ.
ಬೆಂಗಳೂರಿನಲ್ಲಿ ಮೊದಲ ದಿನದ ಅರ್ಧ ಪಾದಯಾತ್ರೆ ಮುಕ್ತಾಯಗೊಳಿಸಿದ ಕಾಂಗ್ರೆಸ್ ನಾಯಕರು.. ಪಾದಯಾತ್ರೆಯಲ್ಲಿ ಈ ಸಾರಿಯು ಕಾಂಗ್ರೆಸ್ ನಾಯಕರು ಎಲ್ಲಿಯೂ ಒಟ್ಟಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಿಲ್ಲ. ತಮ್ಮ ಬೆಂಬಲಿಗರೊಂದಿಗೆ ಪ್ರತ್ಯೇಕವಾಗಿಯೇ ಗುಂಪು ಗುಂಪಾಗಿ ತೆರಳುತ್ತಿರುವುದು ಕಂಡು ಬಂತು. ಬೆಳಗಿನ ಪಾದಯಾತ್ರೆಯ ಅರ್ಧಭಾಗ ಮೈಸೂರು ರಸ್ತೆಯಲ್ಲಿ ಸಾಗಿದರೆ, ಇನ್ನರ್ಧ ಭಾಗ ಹೊರವರ್ತುಲ ರಸ್ತೆಯಲ್ಲಿ ಮುಂದುವರೆಯಿತು.
ಮಾರ್ಗದುದ್ದಕ್ಕೂ ಒಂದು ಭಾಗದಲ್ಲಿ ಪಾದಯಾತ್ರೆ ತೆರಳಿದರೆ ಆ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಮತ್ತೊಂದು ಮಾರ್ಗದಲ್ಲಿ ಸಹಜವಾಗಿಯೇ ಸಂಚಾರದಟ್ಟಣೆ ವಿಪರೀತವೆನಿಸುವಷ್ಟು ಕಂಡು ಬಂತು.
ಬೇಸಿಗೆ ಸಂದರ್ಭ ವಾದ ಹಿನ್ನೆಲೆ ಮಾರ್ಗದುದ್ದಕ್ಕೂ ತಂಪು ಪಾನೀಯ ಹಾಗೂ ನೀರು, ಮಜ್ಜಿಗೆ ವಿತರಣೆ ಯಥೇಚ್ಛವಾಗಿ ಇತ್ತು. ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಮುಖಂಡರ ಜೊತೆ ಹೆಜ್ಜೆ ಹಾಕಿದರು. ರಾಜರಾಜೇಶ್ವರಿನಗರ ಬರುತ್ತಾ ನಾಯಂಡಹಳ್ಳಿ ಜಂಕ್ಷನ್ ಮತ್ತಿತರೆಡೆ ಪಕ್ಷದ ಕಾರ್ಯಕರ್ತರು ನಾಯಕರನ್ನು ವಿಶೇಷವಾಗಿ ಬರಮಾಡಿಕೊಂಡರು. ವಿಶೇಷ ಹಾರ-ತುರಾಯಿಗಳ ಜೊತೆ ಸೇಬಿನ ಹಾರವನ್ನು ಹಾಕುವ ಮೂಲಕ ಸತ್ಕರಿಸಿದರು.
ನಾಯಂಡಹಳ್ಳಿ ಜಂಕ್ಷನ್ ಸಮೀಪ ಕಾಂಗ್ರೆಸ್ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪಾದಯಾತ್ರೆ ಉದ್ದೇಶ ಹಾಗೂ ಇದಕ್ಕೆ ಸರ್ಕಾರದಿಂದ ಎದುರಾಗುತ್ತಿರುವ ತೊಡಕುಗಳ ಬಗ್ಗೆ ವಿವರಿಸಿದರು. ಸರ್ಕಾರ ತಮ್ಮ ವಿರುದ್ಧ ದಾಖಲಿಸುತ್ತಿರುವ ಪ್ರಕರಣಗಳ ಬಗ್ಗೆ ಯಾವುದೇ ಆತಂಕ ಬೇಡ ಎಂಬ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ನಡೆದ ಮೊದಲ ದಿನದ ಪಾದಯಾತ್ರೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸಾಕಷ್ಟು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಗಳೂರು ನಗರದ ಪಾದಯಾತ್ರೆಯನ್ನು ಯಶಸ್ವಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಓದಿ:ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ: ಸಿಎಂ ಬೊಮ್ಮಾಯಿ