ಬೆಂಗಳೂರು: ದಲಿತ ಕವಿ ಎಂದೇ ಪ್ರಸಿದ್ಧರಾಗಿದ್ದ ಸಾಹಿತಿ ಡಾ. ಸಿದ್ದಲಿಂಗಯ್ಯ ಸೇರಿದಂತೆ ರಾಜ್ಯದ ಐವರಿಗೆ ಕೇಂದ್ರ ಸರ್ಕಾರ ಪದ್ಮಶ್ರಿ ಪ್ರಶಸ್ತಿ ಘೋಷಣೆ ಮಾಡಿದೆ. ಸಿದ್ದಲಿಂಗಯ್ಯ (ಸಾಹಿತ್ಯ) ಅವರಿಗೆ ಮರಣೋತ್ತರವಾಗಿ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ. ದಲಿತ ಕವಿಯಾಗಿ ಅವರ ಕೊಡುಗೆ ಅಪಾರವಾಗಿದ್ದು, ಈ ಕಾರಣಕ್ಕೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಶಿಫಾರಸು ಕಳಿಸಿ, ಪದ್ಮ ಪ್ರಶಸ್ತಿ ನೀಡುವಂತೆ ಒತ್ತಡ ಹೇರುವ ಕಾರ್ಯ ಆಗಬೇಕೆಂದು ಪ್ರತಿಪಕ್ಷ ಹಾಗೂ ಸಾಹಿತ್ಯ ವಲಯದಿಂದ ಒತ್ತಡ ಮೂಡಿಬಂದಿತ್ತು.
ಸಿದ್ದಲಿಂಗಯ್ಯ ಒಬ್ಬ ಕವಿ, ಸಾಹಿತಿ, ಮೃದು ಸ್ವಭಾವದ ರಾಜಕಾರಣಿ ಆಗಿದ್ದರು. ದಲಿತ ಹೋರಾಟಗಾರರಾಗಿ, ಕ್ರಾಂತಿಕವಿಯಾಗಿ ಹಾಗೂ ಹಾಸ್ಯಭರಿತ ಮಾತುಗಳಿಂದ ವಿಧಾನ ಪರಿಷತ್ನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಮಾತುಗಾರರಾಗಿ ಜನ ಮಾನಸದಲ್ಲಿ ಪರಿಚಿತರಾಗಿದ್ದರು.
ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು...ಸಿದ್ದಲಿಂಗಯ್ಯ 1975 ರಲ್ಲಿ ಹೊಲೆ ಮಾದಿಗರ ಹಾಡು ಬರೆದರು. 1979ರಲ್ಲಿ ಸಾವಿರಾರು ನದಿಗಳು ಕಾವ್ಯವನ್ನು ಕರ್ನಾಟಕಕ್ಕೆ ನೀಡಿದರು. “ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತವರು, ವದೆಸಿಕೊಂಡು ವರಗಿದವರು ನನ್ನ ಜನಗಳು. ಹೊಲವನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು, ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು“,ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಕಪ್ಪು ಮುಖದ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು. ಹಗಲ ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು. ಕ್ರಾಂತಿಯ ಬಿರುಗಾಳಿಯಲ್ಲಿ ಕೈ ಬೀಸಿದ ನನ್ನ ಜನ, ಛಡಿಯ ಏಟು ಹೊಡೆದವರ, ಕುತ್ತಿಗೆಗಳ ಹಿಡಿದರು. ಪೊಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು, ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ, ತರಗೆಲೆ ಕಸಕಡ್ಡಿಯಾಗಿ ತೇಲಿ ತೇಲಿ ಹರಿದವು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು..’ ಈ ರೀತಿ ಇವರ ಕವಿತೆಯನ್ನು ದಲಿತರ ಹೋರಾಟಕ್ಕೆ ಬಳಸಿದವರು.
ಯಾರಿಗೆ ಬಂತು, ಎಲ್ಲಿಗೆ ಬಂತು, ನಾಲ್ವತ್ತೇಳರ ಸ್ವಾತಂತ್ರ್ಯ ಕವಿತೆಯಂತೂ ಹೋರಾಟಗಾರರ ನಾಲಿಗೆಯ ಶಕ್ತಿಯಾಗಿತ್ತು. ಇಂದಿಗೂ ದಲಿತ ಚಳುವಳಿ, ಹೋರಾಟ, ಪ್ರತಿಭಟನೆಯ ಆರಂಭದಲ್ಲಿ ಕ್ರಾಂತಿಗೀತೆಯಾಗಿ ಇದು ಮೊಳಗುತ್ತದೆ. 1975 ರಿಂದಾಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕವಿತೆಗಳ ಅನುಸರಣೆ ಮಾಡಿದ್ದಾರೆ.
ಹುಟ್ಟು, ಬೆಳವಣಿಗೆ:ಸಿದ್ದಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಮಂಚನ ಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಸೇವೆ:ವೃತ್ತಿಯಲ್ಲಿ ಅಧ್ಯಾಪಕ, ಪ್ರಾಧ್ಯಾಪಕ, ಕವಿ, ಹೋರಾಟಗಾರರಾದ ಇವರು ಬಿ.ಕೃಷ್ಣಪ್ಪ ಅವರೊಂದಿಗೆ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. 1988 ರಲ್ಲಿ ತಮ್ಮ 34 ನೇ ವಯಸ್ಸಿನಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯರಾದರು ಮತ್ತು 1995 ರಿಂದ 2001 ರ ಅವಧಿಗೆ ಜನತಾ ಪರಿವಾರದಿಂದ ವಿಧಾನ ಪರಿಷತ್ಗೆ ನಾಮನಿರ್ದೇಶನಗೊಂಡಿದ್ದರು.