ಬೆಂಗಳೂರು: ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಒಳ ಆಟಗಳು ಒಂದೊಂದೇ ಹೊರಬೀಳುತ್ತಾ ಹೋಗುವುದು ಸಾಮಾನ್ಯ. ಒಬ್ಬರನ್ನು ಹಣಿಯಲು ಇನ್ನೊಬ್ಬರು ಬ್ರಹ್ಮಾಸ್ತ್ರಗಳನ್ನೇ ದಾಳವಾಗಿ ಬಳಸುತ್ತಾರೆ. ಇಂತಹದ್ದೇ ಒಂದು ಹೊಸ ಅಸ್ತ್ರ ಪ್ರಯೋಗಕ್ಕೆ ಡಿಕೆ ಬ್ರದರ್ಸ್ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಈ ಸಾರಿ ಅಚ್ಚರಿ ಮೂಡಿಸುವ ಕಾರ್ಯವನ್ನು ಬಿಜೆಪಿ ಹೈಕಮಾಂಡ್ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಗೃಹ ಸಚಿವ ಹಾಗೂ ಬಿಜೆಪಿಯ ಪ್ರಮುಖ ಒಕ್ಕಲಿಗ ನಾಯಕ ಆರ್. ಅಶೋಕ್ ಅವರನ್ನು ಕನಕಪುರದಲ್ಲಿ ಕಣಕ್ಕಿಳಿಸಿದೆ. ತಮ್ಮ ಕ್ಷೇತ್ರವಾದ ಪದ್ಮನಾಭನಗರ ಜತೆ ಅಶೋಕ್ ಕನಕಪುರದಿಂದಲೂ ಕಣಕ್ಕಿಳಿಯುವಂತೆ ಬಿಜೆಪಿ ಹೈಕಮಾಂಡ್ ಮಾಡಿದೆ. ಈ ಪ್ರಕಟಣೆಯಿಂದಲೇ ತೀವ್ರ ಆಘಾತಕ್ಕೆ ಒಳಗಾಗಿದ್ದ ಅಶೋಕ್, ಹೇಗೋ ಪದ್ಮನಾಭನಗರದಲ್ಲಿ ಗೆದ್ದರೆ ಸಾಕು ಎಂದು ಕನಕಪುರದತ್ತ ಮುಖವನ್ನೂ ಹಾಕುತ್ತಿಲ್ಲ. ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಪ್ರಚಾರ ಮಾಡುತ್ತಿದ್ದಾರೆ.
ಆದರೆ ಅಶೋಕ್ಗೆ ದೊಡ್ಡ ಆಘಾತ ನೀಡುವ ಸುದ್ದಿಯನ್ನು ಡಿಕೆ ಸೋದರರು ಈಗಲೂ ಜೀವಂತವಾಗಿ ಉಳಿಸಿದ್ದಾರೆ. ಆರ್.ಅಶೋಕ್ ವಿರುದ್ಧ ಪದ್ಮನಾಭನಗರದಲ್ಲಿ ಸಂಸದ ಡಿ.ಕೆ. ಸುರೇಶ್ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತು. ಇದರಿಂದ ಅಶೋಕ್ ಅವರಿಗೆ ಇದ್ದ ಅಲ್ಪಸ್ವಲ್ಪ ವಿಶ್ವಾಸವೂ ಹೊರಟು ಹೋಗಿತ್ತು. ಆದರೆ, ಈಗಾಗಲೇ ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿತರಾಗಿರುವ ರಘುನಾಥ್ ನಾಯ್ಡುಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿ ಫಾರಂ ನೀಡಿದರು. ಇದರಿಂದ ಅಶೋಕ್ ಕೊಂಚ ನಿರಾಳರಾದರು. ಆದರೆ ಈಗ ಅವರಿಗೆ ಹಾಗೂ ಬಿಜೆಪಿಗೆ ಆಘಾತ ನೀಡುವ ಸುದ್ದಿ ಹೊರ ಬಿದ್ದಿದೆ.
ಡಿಕೆ ಸೋದರರ ದಾಳ:ಡಿಕೆ ಸೋದರರು ಬಿಜೆಪಿಗೆ ಹಾಗೂ ಆರ್. ಅಶೋಕ್ಗೆ ಶಾಕ್ ನೀಡುವ ಕಾರ್ಯವೊಂದನ್ನು ಮಾಡಿದ್ದಾರೆ. ಪದ್ಮನಾಭನಗರ ಅಭ್ಯರ್ಥಿ ಯಾರು ಎನ್ನುವುದನ್ನು ಈಗಲೂ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಆರ್. ಅಶೋಕ್ಗೆ ದೊಡ್ಡ ಏಟು ಕೊಡುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಿರುವ ಡಿಕೆ ಸಹೋದರರು ಪದ್ಮನಾಭನಗರದಲ್ಲಿ ರಘುನಾಥ ನಾಯ್ಡುಗೆ ಬಿ ಫಾರಂ ನೀಡಿ ಹಾಗೆಯೇ ವಾಪಸ್ ಪಡೆದು ಇರಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.