ಬೆಂಗಳೂರು: ಪದ್ಮವಿಭೂಷಣ ಪುರಸ್ಕಾರ ಬಂದಿದ್ದಕ್ಕೆ ಬಹಳ ಸಂತೋಷ ಆಗುತ್ತಿದೆ. ನಾನು ರಾಜಕೀಯ ನಿವೃತ್ತಿ ಜೀವನ ಆರಂಭ ಮಾಡುತ್ತಿರುವ ಘಟ್ಟದಲ್ಲಿ ನನಗೆ ಈ ಪ್ರಶಸ್ತಿ ಬಂದಿರುವುದು ಬಯಸದೇ ಬಂದ ಭಾಗ್ಯ, ಮತ್ತು ಈ ಪ್ರಶಸ್ತಿಯನ್ನು ಕಳೆದ 6 ದಶಕದಲ್ಲಿ ನನಗೆ ಬೆಂಬಲಿಸಿದ 7 ಕೋಟಿ ಕನ್ನಡಿಗರಿಗೆ ನಮ್ರತೆಯಿಂದ ಅರ್ಪಿಸುತ್ತೇನೆ ಎಂದು ಮಾಜಿ ಸಿಎಂ ಎಸ್. ಎಂ ಕೃಷ್ಣ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಪ್ರಶಸ್ತಿಗಳು ನಿವೃತ್ತಿ ಅದವರಿಗೆ ಕೊಡಬೇಕು ಅನ್ನೋ ನಿಯಮ ಏನಿತ್ತು? ಆದರೂ ನನಗೆ ಕೊಟ್ಟಿದ್ದಾರೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಋಣಿಯಾಗಿದ್ದೇನೆ. ಮತ್ತೆ ನನ್ನ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಇಂದು ನನಗೆ ಬಹಳ ಸಂತೋಷವಾಗಿದೆ. ನನ್ನೊಂದಿಗೆ ನನ್ನ ಆಸೆ ಆಕಾಂಕ್ಷೆಗಳೂ ನಿವೃತ್ತವಾಗಿವೆ ಎಂದರು.
ಪ್ರಶಸ್ತಿಯ ಆಯ್ಕೆಯ ಮಾನದಂಡ ಆಯಾ ಕಾಲಘಟ್ಟದಲ್ಲಿ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಿದೆ. ಇತ್ತೀಚೆಗಷ್ಟೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದೇನೆ. ಅದರ ಸಮೀಪದಲ್ಲೇ ಈ ಪ್ರಶಸ್ತಿ ಬಂದಿದೆ. ನನಗೆ ಬಹಳ ಸಂತೋಷ ಉಂಟು ಮಾಡಿದೆ. ಆರು ದಶಕಗಳಿಂದ ರಾಜಕೀಯವಾಗಿ ಸಾಕಿ, ಸಲಹಿ, ಆಶಿರ್ವಾದ ಮಾಡಿದ ಕನ್ನಡದ ಏಳು ಕೋಟಿ ಜನರಿಗೆ ನಮ್ರತೆಯಿಂದ ಈ ಪ್ರಶಸ್ತಿ ಸಮರ್ಪಣೆ ಮಾಡಿತ್ತೇನೆ ಎಂದರು.
ಡಿಜಿಟಲೀಕರಣದ ಹಿರಿಮೆಯಲ್ಲಿ ಕೃಷ್ಣ ಅವರ ಪಾತ್ರ ಹಿರಿದು- ಅಶ್ವತ್ಥನಾರಾಯಣ ಮೆಚ್ಚುಗೆ:ಇಂದು ದೇಶದಲ್ಲಿ ಡಿಜಿಟಲೀಕರಣ ಯಶಸ್ವಿಯಾಗಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಹಿರಿದಾದ ಪಾಲೂ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮೆಚ್ಚುಗೆ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದ ಹಿನ್ನೆಲೆಯಲ್ಲಿ ಅವರನ್ನು ಸಚಿವರು ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿ, ಅಭಿನಂದಿಸಿದರು.