ಬೆಂಗಳೂರು:ಪಾದರಾಯನಪುರ ಗಲಾಟೆ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ತನಿಖೆಯನ್ನು ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ನಡೆಯುತ್ತಿದ್ದು, ಆರೋಪಿ ತನಿಖೆ ವೇಳೆ ಕೆಲ ಸತ್ಯಗಳನ್ನು ಬಾಯಿಬಿಟ್ಟರೆ ಇನ್ನು ಕೆಲವು ನಾಟಕಗಳನ್ನು ಮಾಡುತ್ತಿದ್ದಾನೆ.
ಈಗಾಗಲೇ ಪೊಲೀಸರು ಇತರೆ ಆರೋಪಿಗಳಾದ ವಜೀರ್, ಕಬೀರ್, ಇರ್ಷಾದ್ ಅಹಮ್ಮದ್, ಹಲ್ಸಾನ್ ಅಲಿಯಾಸ್ ಫರ್ಜನಾ ಅವರನ್ನು ವಿಚಾರಣೆ ನಡೆಸಿದಾಗ, ಪಾದರಾಯನಪುರದ ಜನ ಸೀಲ್‌ಡೌನ್ ಮಾಡಿದ್ದ ಕಾರಣ ಹೊರ ಜಗತ್ತಿನ ಸಂಪರ್ಕ ಕಡಿತಗೊಂಡು ಆವೇಶಕ್ಕೆ ಒಳಗಾಗಿದ್ದರು. ಗಲಾಟೆ ನಡೆಯುವ ಎರಡು ದಿನದ ಹಿಂದೆ ಅಗತ್ಯ ವಸ್ತುಗಳು ಸರಿಯಾಗಿ ದೊರಕುತ್ತಿಲ್ಲ ಎಂದು ದೂರಲಾಗಿತ್ತು. ಜನರ ಆವೇಶವನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಉದ್ರೇಕಗೊಳಿಸಿ ಗಲಾಟೆ ಮಾಡಿದ್ದಾಗಿ ತಿಳಿಸಿದ್ದರು.
ಆದರೆ ಸದ್ಯ ಬಂಧಿತನಾದ ಆರೋಪಿ ಗಲಾಟೆ ನಡೆಯೋ ದಿನ ಪಾದರಾಯನಪುರ ಭಾಗದಲ್ಲಿ ತಾನು ಆಹಾರದ ಪೊಟ್ಟಣವನ್ನು ಹಂಚುತ್ತಿದ್ದೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಬರೋದನ್ನು ಗಮನಿಸಿ, ಏನಾಗಿದೆ ಅಂತ ವಿಚಾರಿಸೋಕೆ ಜನರನ್ನು ತಡೆದು ಕೇಳಿದ್ದೆ. ಕೆಲವರು ಊಟಕ್ಕಿಲ್ಲ ಇದೀಗ ನಮ್ಮನ್ನು ಕ್ವಾರಂಟೈನ್ ಮಾಡೋಕೆ ಕರೆಯೋಕೆ ಮುಂದಾಗಿದ್ದಾರೆ. ಆರೋಗ್ಯಾಧಿಕಾರಿಗಳು, ಪೊಲೀಸರು ಒಟ್ಟೊಟ್ಟಿಗೆ ಬಂದು ನಮ್ಮ ಆರೋಗ್ಯ ತಪಾಸಣೆ ನಡೆಸೋಕೆ ದುಂಬಾಲು ಬೀಳುತ್ತಿದ್ದಾರೆ. ಆದ್ರೆ, ನಾವು ಯಾವ ಕಾರಣಕ್ಕೂ ತಪಾಸಣೆ ಮಾಡಿಸಿಕೊಳ್ಳಬಾರದು ಎಂದು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಹೀಗಾಗಿ ಜನರ ಜೊತೆ ಕೈಜೋಡಿಸಿ ನಾನು ಕೂಡ ಮುಂದೆ ಹೋದೆ. ಆದ್ರೆ, ಕೆಲ ಮಾದಕ ವ್ಯಸನಿಗಳು ನನ್ನ ಮಾತನ್ನು ಶಾಂತವಾಗಿ ಕೇಳೋದನ್ನು ಬಿಟ್ಟು ಗಲಾಟೆಗೆ ನಿಂತು ಬಿಟ್ಟಿದ್ದರು. ಗಲಾಟೆ ಮಾಡೋದು ಬೇಡ ಅಂದಿದ್ದಕ್ಕೆ ನನ್ನ ಮೇಲೆಯೇ ಹಲ್ಲೆಗೆ ಮುಂದಾಗೋಕೆ ಮುಂದಾದರು. ಪರಿಸ್ಥಿತಿ ಯಾವಾಗ ಕೈಮೀರೋಕೆ ಶುರುವಾಯ್ತೋ ಆಗ್ಲೇ ನಾನು ಅಲ್ಲಿಂದ ಕಾಲ್ಕಿತ್ತಿದ್ದೆ ಎಂದು ಪೊಲೀಸರೆದುರು ಇರ್ಫಾನ್ ಹೇಳಿಕೆ ನೀಡಿದ್ದಾನೆ.
ಸದ್ಯ ಪೊಲೀಸರ ತನಿಖೆಯಲ್ಲಿ ಇರ್ಫಾನ್ ಪ್ರಕರಣದ ಸೂತ್ರದಾರ ಅನ್ನೋದು ಸ್ಪಷ್ಟವಾಗಿದೆ. ಸದ್ಯ ಪೊಲೀಸರ ಭಾಷೆಯಲ್ಲಿ ಇರ್ಫಾನ್ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ. ಯಾಕಂದ್ರೆ, ಇರ್ಫಾನ್ ಕೂಡ ಪಾದರಾಯನಪುರದ ನಿವಾಸಿಯಾಗಿದ್ದು, ಅಲ್ಲಿ ಈಗಾಗಲೇ ಕೊರೊನಾ ಸೋಂಕು ಬಹಳಷ್ಟು ಪತ್ತೆಯಾದ ಕಾರಣ ಇರ್ಫಾನ್ಗೆ ಕೂಡ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಸದ್ಯ ಆತನ ವರದಿ ಇಂದು ಬರುವ ಕಾರಣ ಪೊಲೀಸರು ದೂರದಲ್ಲೇ ನಿಂತು ತನಿಖೆ ನಡೆಸುತ್ತಿದ್ದಾರೆ.