ಬೆಂಗಳೂರು: ಪಿ. ರವಿಕುಮಾರ್ ಅವರು ರಾಜ್ಯದ 38 ನೇ ಮುಖ್ಯ ಕಾರ್ಯದರ್ಶಿಯಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ಇಂದು ಸಂಜೆ ಟಿ.ಎಂ. ವಿಜಯಭಾಸ್ಕರ್ ಅವರು ರವಿಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ರಾಜ್ಯದ ಹಲವಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವ ಪಿ. ರವಿಕುಮಾರ್ ಅವರು ಒಂದುವರೆ ವರ್ಷದ ಅಧಿಕಾರಾವಧಿಯ ಅನುಭವವನ್ನು ಹೊಂದಿದ್ದಾರೆ.
ಪಿ. ರವಿಕುಮಾರ್ ಪರಿಚಯ
1962, ಮೇ 3 ರಂದು ಜನಿಸಿದ ರವಿಕುಮಾರ್, 1984ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರು ಕರ್ನಾಟಕ ಕೇಡರ್ನಲ್ಲಿ 2ನೇ ಅತೀ ಹಿರಿಯ ಐಎಎಸ್ ಅಧಿಕಾರಿ ಎನಿಸಿದ್ದಾರೆ. ಮೇ 2022ಕ್ಕೆ ನಿವೃತ್ತಿಯಾಗಲಿರುವ ಇವರು, ಒಂದೂವರೆ ವರ್ಷದ ಅಧಿಕಾರವಧಿಯನ್ನು ಹೊಂದಿರುತ್ತಾರೆ. ಪ್ರಸ್ತುತ ಮುಖ್ಯ ಕಾರ್ಯದರ್ಶಿಯಾಗಿರುವ ಟಿ.ಎಂ.ವಿಜಯ್ ಭಾಸ್ಕರ್ ಡಿಸೆಂಬರ್ 31ಕ್ಕೆ ನಿವೃತ್ತಿ ಹೊಂದುತ್ತಿದ್ದಾರೆ.
ತೆರವಾಗಲಿರುವ ಈ ಸ್ಥಾನದ ಮೇಲೆ ಹಲವರು ಹೆಸರು ಕೇಳಿ ಬಂದಿತ್ತಾದರೂ ಅವರ ಜಾಗಕ್ಕೆ ಪಿ.ರವಿಕುಮಾರ್ ಅವರು ನೇಮಕಗೊಂಡಿದ್ದಾರೆ. ಇದಕ್ಕೂ ಮುನ್ನ ಇಂಧನ ಇಲಾಖೆಯಲ್ಲಿದ್ದ ಇವರು, ಸಿಎಂ ಅಪರ ಮುಖ್ಯಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಇಂಧನ ಕಾರ್ಯದರ್ಶಿಯಾಗಿದ್ದಾಗ, ಪಾವಗಡದ ಸೌರಶಕ್ತಿ ವಿದ್ಯುತ್ ಸ್ಥಾವರ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸಿದ್ದರು.
ಓದಿ:ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಪಿ.ರವಿಕುಮಾರ್ ನೇಮಕ
ಇನ್ನು ಮುಖ್ಯಕಾರ್ಯದರ್ಶಿ ಹುದ್ದೆಯ ಮೇಲೆ ಹಿರಿಯ ಐಎಎಸ್ ಅಧಿಕಾರಿಗಳಾದ ಐ.ಎಸ್.ಎನ್.ಪ್ರಸಾದ್, ರಜನೀಶ್ ಗೋಯಲ್ ಸೇರಿದಂತೆ ಮತ್ತಿತರರು ಕಣ್ಣಿಟ್ಟಿದ್ದರು ಎನ್ನಲಾಗಿದೆ. ಆದರೆ, ಸೇವಾ ಹಿರಿತನದ ಜೊತೆಗೆ ಆಡಳಿತಾಧಿಕಾರಿಯಾಗಿ ಉತ್ತಮ ಗೌರವ, ಸ್ಥಾನಮಾನ, ವಿಶ್ವಾಸ ಗಳಿಸಿಕೊಂಡಿರುವ ರವಿಕುಮಾರ್, ಕೊರೊನಾ ಲಾಕ್ಡೌನ್ ನಂತರ ರಾಜ್ಯದ ಹಣಕಾಸು ಸ್ಥಿತಿಗತಿ ಇಳಿಕೆಯಾಗಿರುವ ಸಂದರ್ಭದಲ್ಲಿ ಅನೇಕ ಸವಾಲಿನ ಮಧ್ಯೆ ಮುಖ್ಯ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳುತ್ತಿದ್ದಾರೆ.
ಅವರ ಮುಂದಿರುವ ಅತಿದೊಡ್ಡ ಸವಾಲು ತೆರಿಗೆ ಸಂಗ್ರಹ. ಹಣಕಾಸು ಕೊರತೆಯನ್ನು ಶೇ. 3ಕ್ಕಿಂತ ಕಡಿಮೆ ಮಾಡಬೇಕಿದೆ. ರಾಜ್ಯವನ್ನು ಸಾಲಮುಕ್ತಗೊಳಿಸುವುದು, ದೇಶೀಯ ಒಟ್ಟು ಸರಾಸರಿ ಉತ್ಪನ್ನದಲ್ಲಿ ರಾಜ್ಯದ ಪಾಲು ಶೇ. 25ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳುವುದು ಅವರ ಎದುರಿಗಿರುವ ಸವಾಲಾಗಿದೆ.