ಬೆಂಗಳೂರು: ಚಿಲುಮೆ ಸಂಸ್ಥೆಯನ್ನು ಚುನಾವಣಾ ಜಾಗೃತಿ ಮೂಡಿಸಲು ನೇಮಕ ಮಾಡಿದ್ದು ಹಿಂದಿನ ಸರ್ಕಾರ. ಚುನಾವಣೆ ಹತ್ತಿರ ಬಂದಾಗ ಶಾಸಕರಿಗೆ ಹಾಗೂ ಆಕಾಂಕ್ಷಿಗಳಿಗೆ ಯಾರ್ಯಾರೋ ಫೋನ್ ಕರೆ ಮಾಡಿ ನಮ್ಮತ್ರ ಬೇರೆ ಬೇರೆ ದಾಖಲೆ ಇದೆ ಎನ್ನುತ್ತಾರೆ. ನನಗೂ ಇಂತಹ ಕಾಲ್ ಬರುತ್ತಿರುತ್ತವೆ. ಮತದಾರರ ಸೇರ್ಪಡೆ ಹಾಗೂ ಡಿಲೀಟ್ ಮಾಡುವ ಅಧಿಕಾರ ಇರುವುದು ಚುನಾವಣಾ ಆಯೋಗಕ್ಕೆ ಮಾತ್ರ. ಇವರು ಹೇಗೆ ಸೇರ್ಪಡೆ ಮಾಡುತ್ತಾರೆ ಡಿಲೀಟ್ ಮಾಡುತ್ತಾರೆ? ಎಂದು ಕುಡುಚಿ ಬಿಜೆಪಿ ಶಾಸಕ ಪಿ.ರಾಜೀವ್ ಪ್ರಶ್ನಿಸಿದರು.
ಶಾಸಕರ ಭವನದಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ತನ್ನ ಬದ್ಧತೆ ತೋರಿಸಿಕೊಂಡು ಬಂದಿದೆ. ಬಿಜೆಪಿ ಇಂತಹ ಸಂಸ್ಥೆಗಳ ಜೊತೆ ಕೈಜೋಡಿಸುವ ಪ್ರಶ್ನೆ ಇಲ್ಲ. ಯಾವ ಕಾರಣಕ್ಕಾಗಿ ಅಲ್ಲಿ ಸಚಿವರ ಲೆಟರ್ ಹೆಡ್ ಬಂತು ಎಂಬ ಬಗ್ಗೆ ತನಿಖೆ ಆಗಲಿ. ಚುನಾವಣಾ ಆಯೋಗ ಇಂತಹ ಸಂಸ್ಥೆಗಳಿಗೆ ಅಧಿಕಾರ ಕೊಟ್ಟಿರುವುದಿಲ್ಲ ಎಂದು ಅನ್ನಿಸುತ್ತೆ. ಚುನಾವಣಾ ಆಯೋಗ ಇಂತಹ ಆರೋಪ ಬಂದಾಗ ತನಿಖೆ ನಡೆಸಲಿ. ತಪ್ಪಿತಸ್ಥರು ಇದ್ದರೆ ಶಿಕ್ಷೆ ಆಗಲಿ. ಚುನಾವಣಾ ಆಯೋಗವನ್ನು ಗಟ್ಟಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ಬಳಕೆ ಮಾಡಿದ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸುಳ್ಳು ಅಂಕಿ - ಅಂಶ ಕೊಡುವಲ್ಲಿ ಎಕ್ಸ್ ಪರ್ಟ್. ಅವರ ಅನುಕೂಲಕ್ಕೆ ತಕ್ಕಂತೆ ಬಳಸುತ್ತಾರೆ ಎಂದು ಕಿಡಿ ಕಾರಿದರು.