ಬೆಂಗಳೂರು :ಆಕ್ಸಿಜನ್ ಆನ್ವೀಲ್ಸ್ ಎನ್ನುವ ಬಿಎಂಟಿಸಿ ಬಸ್ ಜನರ ಸೇವೆಗೆ ಲಭ್ಯವಾಗಿದೆ. ಖಾಸಗಿ ಫೌಂಡೇಶನ್ ವತಿಯಿಂದ ಜನರಿಗೆ ಉಚಿತವಾಗಿ ಬಸ್‌ನಲ್ಲಿಯೇ ಆಕ್ಸಿಜನ್ ಸೌಲಭ್ಯ ಪ್ರಾರಂಭವಾಗಿದೆ.
ಆಕ್ಸಿಜನ್ ಎಮರ್ಜೆನ್ಸಿ ಇರುವ ಸೋಂಕಿತರು ಇಲ್ಲಿ ಬಂದು ಉಚಿತವಾಗಿ ಆಮ್ಲಜನಕ ಪಡೆಯಬಹುದಾಗಿದೆ. ಏಕಕಾಲದಲ್ಲಿ ಎಂಟರಿಂದ ಹತ್ತು ಸೋಂಕಿತರಿಗೆ ಬಸ್ನಲ್ಲಿ ಆಕ್ಸಿಜನ್ ನೀಡಬಹುದಾಗಿದೆ. ಖಾಸಗಿ ಫೌಂಡೇಶನ್ಗೆ ಬಿಎಂಟಿಸಿ ಸಂಸ್ಥೆ ಸಾಥ್ ನೀಡಿದೆ.
ಉಚಿತವಾಗಿ ಬಸ್ ಕೊಡುವ ಮೂಲಕ ಕೈಜೋಡಿಸಿದೆ. ನಿನ್ನೆ ಪ್ರಾಯೋಗಿಕವಾಗಿ ಆಕ್ಸಿಜನ್ ಕೊರತೆ ಇರುವ ನಾಲ್ಕು ಸೋಂಕಿತರು ಬಸ್ನಲ್ಲೇ ಆಕ್ಸಿಜನ್ ಪಡೆದಿದ್ದಾರೆ. ರಾಜಧಾನಿಯ ಟೌನ್ ಹಾಲ್ ಬಳಿ ಆಕ್ಸಿಜನ್ ಬಸ್ ಕಾರ್ಯನಿರ್ವಹಿಸುತ್ತಿದೆ.
ಅಲ್ಲದೇ, ಇಂದು ಸುಮಾರು 6 ಸೋಂಕಿತರು ಈವರೆಗೆ ಸೌಲಭ್ಯ ಪಡೆದಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆಯ ಸ್ವಯಂ ಸೇವಕರೊಬ್ಬರು ತಿಳಿಸಿದ್ದಾರೆ.
ಬಿಎಂಟಿಸಿಯಆಕ್ಸಿಜನ್ 'ಆನ್ವೀಲ್ಸ್' ಬಸ್.. ಬಸ್‌ನಲ್ಲಿರುವ ವಿಶೇಷತೆಗಳು : ಕೋವಿಡ್ ಪಿಡುಗು ಅಧಿಕವಾಗಿ ಸಾರ್ವಜನಿಕರು ಆಕ್ಸಿಜನ್ಗಾಗಿ ಪರಿತಪಿಸುವುದನ್ನು ತಪ್ಪಿಸಲು ಖಾಸಗಿ ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಬಿಎಂಟಿಸಿ ಸಂಸ್ಥೆಯು ಪ್ರಾಯೋಗಿಕವಾಗಿ ಮೊಬೈಲ್ ಆಕ್ಸಿಜನ್ ಘಟಕವನ್ನು ಪ್ರಾರಂಭಿಸಿದೆ.
ಪ್ರಸ್ತುತ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡುವುದು ವಿಳಂಬವಾಗಿ ತೀವ್ರ ತೊಂದರೆಯಾಗಿತ್ತು.
ಇದನ್ನು ತಪ್ಪಿಸುವ ಉದ್ದೇಶದಿಂದ ಬಸ್ನಲ್ಲಿಯೇ ತುರ್ತು ಆಕ್ಸಿಜನ್ ಸೌಲಭ್ಯ ಒದಗಿಸಲು ಈ ನೂತನ ವ್ಯವಸ್ಥೆ ಕಲ್ಪಿಸುತ್ತಿದ್ದು, ಈಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಕೋವಿಡ್ ಪೀಡಿತರು ಬಂದಾಗ ತಕ್ಷಣಕ್ಕೆ ಆಸ್ಪತ್ರೆಯ ಒಳಗೆ ಆಕ್ಸಿಜನ್ ಸಿಗದಿದ್ದರೆ ಆತಂಕ ಪಡದೇ ಈ ಆಕ್ಸಿಜನ್ ಮೊಬೈಲ್ ಬಸ್‌ನಲ್ಲಿಯೇ ತುರ್ತಾಗಿ ವಿಶ್ರಮಿಸಿ ಅಗತ್ಯ ಆಕ್ಸಿಜನ್ ಪಡೆದುಕೊಳ್ಳಲು ಸಾಧ್ಯವಾಗುವಂತೆ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ.
ಫೌಂಡೇಶನ್ ಇಂಡಿಯಾ ಎಂಬ ಸ್ವಯಂಸೇವಾ ಸಂಸ್ಥೆಯವರು ಈ ಬಸ್ನಲ್ಲಿ ಆಕ್ಸಿಜನ್ ಸರಬರಾಜು ಮಾಡಿ ಸೇವೆ ನೀಡಲು ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸಿದ್ದಾರೆ.
ಏಕಕಾಲಕ್ಕೆ ಒಟ್ಟು ಹತ್ತು ಮಂದಿ ರೋಗಿಗಳಿಗೆ ಈ ಬಸ್ನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್‌ನಂತಹ ಅಪಾಯಕಾರಿ ರೋಗದಿಂದ ತತ್ತರಿಸುತ್ತಾ ಆಕ್ಸಿಜನ್‌ಗಾಗಿ ಪ್ರಯಾಸ ಪಡುವವರಿಗೆ ಇದು ಸಂಜೀವಿನಿಯಾಗಿದೆ.
ಚಾಲಕರು ಮತ್ತು ಸಿಬ್ಬಂದಿಗೆ ಸೋಂಕು ಹರಡದಂತೆ ವಿಶೇಷ ವಿನ್ಯಾಸದೊಂದಿಗೆ 'ಆಕ್ಸಿಜನ್ ಆನ್ ವ್ಹೀಲ್ಸ್' ಬಸ್‌ನ ಸಜ್ಜುಗೊಳಿಸಲಾಗಿದೆಯಲ್ಲದೇ, ಸ್ಯಾನಿಟೈಸರ್, ಮಾಸ್ಕ್‌ಗಳನ್ನು ಇದರಲ್ಲಿ ಒದಗಿಸಲಾಗುವುದು. ಪ್ರತಿ ರೋಗಿಗಳೂ ಸಾಮಾನ್ಯವಾಗಿ 2 ರಿಂದ 4 ಗಂಟೆಯ ಅವಧಿಯಲ್ಲಿ ಈ ಸೌಲಭ್ಯದಿಂದ ತಮಗೆ ಬೇಕಾದ ಅಗತ್ಯ ಪ್ರಮಾಣದ ಆಕ್ಸಿಜನ್ ಪಡೆದುಕೊಳ್ಳಬಹುದಾಗಿದೆ.
ಈ ವಿಶೇಷ 'ಆಕ್ಸಿಜನ್ ಬಸ್ ಸೌಲಭ್ಯ' ಯಶಸ್ವಿಯಾದರೆ ಮುಂದೆ ಇನ್ನಷ್ಟು 'ಆಕ್ಸಿಜನ್ ಬಸ್ ಸೌಲಭ್ಯ' ನೀಡಲು ಸಾರಿಗೆ ನಿಗಮಗಳಿಂದ ಪ್ರಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಸವದಿ ಕೂಡ ತಿಳಿಸಿದ್ದರು. ಈ ರೀತಿಯ ಮೊಬೈಲ್ ಆಕ್ಸಿಜನ್ ಬಸ್ ಪ್ರಯೋಗವು ಇಡೀ ದೇಶದಲ್ಲಿಯೇ ಒಂದು ವಿನೂತನ ಯತ್ನವಾಗಿದೆ.
ಒಟ್ಟು ಒಂದು ಬಸ್ನಲ್ಲಿ 6 ಆಕ್ಸಿಜನ್ ಸಿಲಿಂಡರ್ಗಳು, 4 ಕನ್ಸನ್ಟ್ರೆಟರ್ ಇರಲಿದ್ದು, ಒಟ್ಟು 10 ಜನ ಒಂದೇ ಬಾರಿ ಆಮ್ಲಜನಕ ಪಡೆಯಬಹುದು. ಕೇವಲ ಅವಶ್ಯಕತೆ ಇದ್ದವರಿಗೆ ಮಾತ್ರ ಅವಕಾಶ ಕೊಡಲಾಗುತ್ತಿದೆ.
ಓದಿ:‘ಪಾಪದ ಹಣದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿಲ್ಲ’: ಬಿಜೆಪಿ