ಬೆಂಗಳೂರು :ಶ್ರೀಮಂತನ ಮನೆಯಲ್ಲಿ ಸೆಕ್ಯೂರಿಟಿಯಾಗಿದ್ದವರೇ ಮನೆಗೆ ಕನ್ನ ಹಾಕಿ ಪರಾರಿಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಮೂವರು ಸೆಕ್ಯೂರಿಟಿ ಗಾರ್ಡ್ ಸೇರಿದಂತೆ 7 ಮಂದಿ ದರೋಡೆಕೋರರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಕೋರಮಂಗಲ ನಿವಾಸಿ ಮದನ್ ಮೋಹನ್ ರೆಡ್ಡಿ ಎಂಬುವರು ನೀಡಿದ ದೂರಿನ ಮೇರೆಗೆ ನೇಪಾಳ ಮೂಲದ ಟೀಕಾ ರಾಮ್ ಬಿಸ್ಟಾ, ಪ್ರೇಮ್ ಬಹದ್ದೂರ್ ಬಿಸ್ಟಾ, ಧನ ಬಿಸ್ಟಾ, ಜನಕ್‌ಕುಮಾರ್, ಕಮಲ್ ಜಾಜೋ, ಜನಕ್ ಜೈಶಿ ಹಾಗೂ ಸುನಿಲ್ ಬಹದ್ದೂರ್ ಶಾಹಿ ಎಂಬುವರನ್ನು ಬಂಧಿಸಿ 60 ಲಕ್ಷ ಮೌಲ್ಯದ 857 ಗ್ರಾಂ ಚಿನ್ನ, 66.96 ಗ್ರಾಂ ತೂಕದ ವಜ್ರದ ಆಭರಣ 4 ವಾಚ್ಗಳು ಹಾಗೂ 2.08 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಸೆಕ್ಯೂರಿಟಿ ಗ್ಯಾಂಗ್ ಹೆಡೆಮುರಿ ಕಟ್ಟಿದ ಪೊಲೀಸರು.. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಸಂಜಯ್ ಹಾಗೂ ರಂಜಿತ್ ಎಂಬುವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ ಜೋಷಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ :ಬ್ಯುಸಿನೆಸ್ ಮ್ಯಾನ್ ಮದನ್ ಮೋಹನ್ ರೆಡ್ಡಿ ಕೆಲಸದ ಸಲುವಾಗಿ ಮಗಳು ಒಬ್ಬಳನ್ನೇ ಬಿಟ್ಟು ಕುಟುಂಬಸ್ಥರು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಫಾರ್ಮ್ ಹೌಸ್ಗೆ ಹೋಗಿದ್ದರು.
ಕಳೆದ 3 ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಟೀಕಾ ರಾಮ್ ಬಿಸ್ಟಾ, ಪ್ರೇಮ್ ಬಹದ್ದೂರ್ ಹಾಗೂ ಧನ ಬಿಸ್ಟಾ ಮನೆ ಕಡೆ ಜೋಪಾನ ಎಂದು ಹೇಳಿ ಹೋಗಿದ್ದರು.
ಮಾಲೀಕರು ಮನೆ ಬಿಡುತ್ತಿದ್ದಂತೆ ಪೂರ್ವಯೋಜಿತವಾಗಿ ಸಂಚು ರೂಪಿಸಿಕೊಂಡು ತನ್ನ ಸಹಚರರನ್ನು ಕರೆಯಿಸಿಕೊಂಡಿದ್ದಾನೆ. ಮುಖ ಚಹರೆ ಗೊತ್ತಾಗದಂತೆ ಮಂಕಿ ಕ್ಯಾಪ್ ಧರಿಸಿಕೊಂಡು ಟೀಕಾರಾಮ್ ಗ್ಯಾಂಗ್ ನುಗ್ಗಿದೆ.
ಇದನ್ನು ಪ್ರಶ್ನಿಸಿದ ಯುವತಿಗೆ ಗಾಜಿನ ಬಾಟಲಿ ತೋರಿಸಿ ಸಾಯಿಸುವುದಾಗಿ ಹೆದರಿಸಿ ಸುಮಾರು ಒಂದೂವರೆ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಎಸಿಪಿ ಕರಿಬಸವನಗೌಡ ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಗಳ ಪತ್ತೆಗಾಗಿ 3 ವಿಶೇಷ ತಂಡ ರಚಿಸಿದ್ದಾರೆ. ಒಂದು ತಂಡ ನೇಪಾಳ ಗಡಿ, ಎರಡನೇ ತಂಡ ಮಹಾರಾಷ್ಟ್ರ ಹಾಗೂ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು ತನಿಖೆ ನಡೆಸಿದ್ದಾರೆ.
ಫೇಸ್ಬುಕ್ ನೀಡಿತು ಸುಳಿವು :ಮಾಲೀಕ ಮದನ್ ಮೋಹನ್ ರೆಡ್ಡಿ ಸೆಕ್ಯೂರಿಟಿಯಾಗಿ ನಿಯೋಜಿಸುವಾಗ ಆರೋಪಿಯ ಮನೆ, ವಿಳಾಸ ಹೀಗೆ ಯಾವುದೇ ಪೂರ್ವಾಪರ ತೆಗೆದುಕೊಂಡಿರಲಿಲ್ಲ. ಇದು ಆರೋಪಿಗಳ ಪತ್ತೆಗೆ ಸವಾಲಾಗಿತ್ತು. ಲಭ್ಯವಿದ್ದ ಮೊಬೈಲ್ ನಂಬರ್‌ನ ಆರೋಪಿಗಳು ಸ್ವಿಚ್ ಆಫ್ ಮಾಡಿಕೊಂಡಿದ್ದರು. ತಾಂತ್ರಿಕ ದೃಷ್ಟಿಯಿಂದಲೂ ತನಿಖೆ ನಡೆಸಿದಾಗಲೂ ಆರೋಪಿಗಳ ಸುಳಿವಿನ ಬಗ್ಗೆ ಪತ್ತೆಯಾಗಿರಲಿಲ್ಲ.
ಆದರೆ, ದರೋಡೆಕೋರರು ಫೇಸ್ಬುಕ್ ಹಾಗೂ ಇನ್ಸ್ಸ್ಟಾಗ್ರಾಮ್ ಬಳಕೆ ಮಾಡುತ್ತಿರುವ ವಿಚಾರ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ತಡ ಮಾಡದೆ ಆರೋಪಿಗಳ ಫ್ರೆಂಡ್ ಲಿಸ್ಟ್ ಸ್ನೇಹಿತರ ಮೂಲಕ ಸೆಕ್ಯೂರಿಟಿ ಟೀಕಾ ರಾಮ್ ಬಿಸ್ಟಾ, ಪ್ರೇಮ್ ಬಹದ್ದೂರ್ ಹಾಗೂ ಧನ ಬಿಸ್ಟಾ ಮೂವರನ್ನು ಪುಣೆಯಲ್ಲಿ ಬಂಧಿಸಿದ್ರೆ ಇನ್ನುಳಿದ ಆರೋಪಿಗಳನ್ನು ನೇಪಾಳ ಗಡಿ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಮದ್ಯ ಕಾರ್ಖಾನೆ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆಯೇ ಹಲ್ಲೆ: ಕಾನ್ಸ್ಟೇಬಲ್ ಸಾವು