ಬೆಂಗಳೂರು: ಅವಧಿ ಮೀರಿ ಪಾರ್ಟಿ ನಡೆದಿದ್ದು, ಪಬ್ ಮಾಲೀಕರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಗದಿತ ಅವಧಿ ಮುಗಿದ ಬಳಿಕವೂ ಪಾರ್ಟಿ ಮುಂದುವರೆಸಲು ಅವಕಾಶ ನೀಡಿರುವುದು ಪಬ್ ಮಾಲೀಕರ ನಿರ್ಲಕ್ಷ್ಯ. ಹಾಗಾಗಿ ಜೆಟ್ ಲ್ಯಾಗ್ ರೆಸ್ಟೋ ಬಾರ್ ಮಾಲೀಕರು ಹಾಗೂ ಮ್ಯಾನೇಜರ್ ವಿರುದ್ಧ ಸ್ವಯಂಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ.
ಡಿಸಿಪಿ ಸೈದುಲು ಅಡಾವತ್ ಮಾಹಿತಿ: ಜನವರಿ 3 ರಂದು ರಾತ್ರಿ ಜೆಟ್ ಲ್ಯಾಗ್ ರೆಸ್ಟೋ ಬಾರ್ನಲ್ಲಿ ಕೆಲವರು ಬಂದು ಪಾರ್ಟಿ ಮಾಡಿದ್ದಾರೆ. 12:30ರ ಸುಮಾರಿಗೆ ತೆರಳಿದ್ದ ಬೀಟ್ ಪೊಲೀಸ್ ಸಿಬ್ಬಂದಿ, ಪಬ್ ಕ್ಲೋಸ್ ಮಾಡುವಂತೆ ತಿಳಿಸಿ ಬಂದಿದ್ದರು. ಆದರೆ ಅವಧಿ ಮೀರಿ, ರಾತ್ರಿ 1 ಗಂಟೆಯ ನಂತರವೂ ಲಿಕ್ಕರ್ ಸರ್ವ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿ ಪಡೆದುಕೊಂಡು ರಾತ್ರಿ ಪಾಳಿಯಲ್ಲಿದ್ದ ಪಿಎಸ್ಐ ನೀಡಿರುವ ದೂರಿನನ್ವಯ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಅಬಕಾರಿ ಕಾಯ್ದೆಯಡಿ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.