ಬೆಂಗಳೂರು :ನಿನ್ನೆ (ಶನಿವಾರ) ರಾಜ್ಯಾದ್ಯಂತ ನಡೆದ 'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ವಿನೂತನ ಕಾರ್ಯಕ್ರಮದಲ್ಲಿ ಸುಮಾರು 45 ಲಕ್ಷ ರೈತರ ಮನೆಗೆ ದಾಖಲೆಗಳನ್ನು ತಲುಪಿಸಲಾಗಿದೆ.
ಚಿಕ್ಕಬಳ್ಳಾಪುರದ ಜಿಲ್ಲೆಯ ಗುಂಗೀರ್ಲಹಳ್ಳಿಯಲ್ಲಿ ನಡೆದ 'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು.
ರಾಜ್ಯಾದ್ಯಂತ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ರೈತರ ಮನೆಗೆ ತೆರಳಿ ಕಂದಾಯ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡಿದರು.
ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆ ಒಂದು ದಿನದ ಈ ಕಡತ ಯಜ್ಞ ಕಾರ್ಯಕ್ರಮದಲ್ಲಿ ಕಂದಾಯ ದಾಖಲೆಗಳಾದ ಆರ್ಟಿಸಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ನಿನ್ನೆ ಸುಮಾರು 45 ಲಕ್ಷಕ್ಕೂ ಅಧಿಕ ರೈತರಿಗೆ ದಾಖಲೆ ನೀಡುವಲ್ಲಿ ಕಂದಾಯ ಇಲಾಖೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳಲ್ಲಿ ಮನೆಗೆ ತಲುಪಿಸಿದ ಕಡತಗಳ ನಿಖರ ಅಂಕಿ-ಅಂಶ ಲಭ್ಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಾದ್ಯಂತ 62,85,819 ರೈತರಿಗೆ ಕಂದಾಯ ಕಡತಗಳನ್ನು ತಲುಪಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ ಸುಮಾರು ಶೇ.75ರಷ್ಟು ರೈತರ ಮನೆಗೆ ಕಡತಗಳನ್ನು ತಲುಪಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ(ಮಾ.12) ಒಟ್ಟು 1,74,71,807 ಪಹಣಿ, 4,93,30,889 ಜಾತಿ ಪ್ರಮಾಣ ಪತ್ರ ಹಾಗೂ 2,76,56,058 ಆದಾಯ ಪ್ರಮಾಣ ಪತ್ರಗಳನ್ನು ರೈತರ ಮನೆಗೆ ತಲುಪಿಸುವ ಗುರಿ ಹೊಂದಲಾಗಿತ್ತು. ಅಂದರೆ ಒಟ್ಟು 10,66,89,018 ಕಂದಾಯ ದಾಖಲೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಗುರಿ ಹೊಂದಲಾಗಿತ್ತು.
ಆ ಪೈಕಿ ಶೇ. 75ರಷ್ಟು ರೈತರ ಮನೆಗಳಿಗೆ ಕಂದಾಯ ದಾಖಲೆಗಳನ್ನು ತಲುಪಿಸಲಾಗಿದೆ. ಲಾಜಿಸ್ಟಿಕ್ ಸಮಸ್ಯೆಯಿಂದ ತಲುಪಿಸಲಾಗದ ದಾಖಲೆಗಳನ್ನು ಇಂದು ರೈತರ ಮನೆ ಬಾಗಿಲಿಗೆ ಮುಟ್ಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ಕಾರ್ಯಕ್ರಮಕ್ಕೆ ಚಾಲನೆ
ಏನಿದು 'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ಯೋಜನೆ?:ಕಂದಾಯ ದಾಖಲೆ ರೈತನ ಮನೆ ಬಾಗಿಲಿಗೆ ಎನ್ನುವುದು ರೈತರ ಜಮೀನಿನ ದಾಖಲೆಗಳಾದ ಪಹಣಿ, ಅಟ್ಲಾಸ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡುವ ಯೋಜನೆಯಾಗಿದೆ. ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಶನಿವಾರ(ಮಾ.12) ಚಾಲನೆ ಸಿಕ್ಕಿದೆ.