ಬೆಂಗಳೂರು: ಸಿಎಂ ನಿವಾಸದ ಮುಂಭಾಗದ ಕುಮಾರಕೃಪಾ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಂಡುವಂತೆ ಕಾಂಗ್ರೆಸ್ ನಿಯೋಗ ಆಗ್ರಹಿಸಿದೆ.
ಬ್ಯಾರಿಕೇಡ್ ತೆಗಿರಿ ಎಂದು ಕಾಂಗ್ರೆಸ್ ಮುಖಂಡರ ಆಕ್ರೋಶ ಈ ಸಂಬಂಧ ಮನವಿ ಸಲ್ಲಿಸಲು ಮಾಜಿ ಮೇಯರ್ ರಾಮಚಂದ್ರಪ್ಪ, ಮನೋಹರ್ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಕಾವೇರಿ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಪೊಲೀಸರು ಸಿಎಂ ನಿವಾಸದ ಮುಂಭಾಗದಲ್ಲೇ ತಡೆದಿದ್ದಾರೆ.
ಇದು ಪಬ್ಲಿಕ್ ರಸ್ತೆ. ಇಲ್ಲಿ ಯಾಕೆ ಇವರು ಬಂದ್ ಮಾಡಿದ್ದಾರೆ ಎಂದು ಮಾಜಿ ಮೇಯರ್ ರಾಮಚಂದ್ರಪ್ಪ ಪ್ರಶ್ನೆ ಮಾಡಿದರು. ಈ ವೇಳೆ ಕಾಂಗ್ರೆಸ್ ನಿಯೋಗ ವಿಂಡ್ಸರ್ ಸ್ಕ್ವೇರ್ ಬಳಿ ರಸ್ತೆಗೆ ಅಳವಡಿಸಿರುವ ಬ್ಯಾರಿಕೇಡ್ ತೆರವುಗೊಳಿಸಲು ಮುಂದಾದರು. ಆಗ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದಿದ್ದಾರೆ.
ಇಲ್ಲಿ ಆ್ಯಂಬುಲೆನ್ಸ್ ಸುತ್ತಾಡಿಕೊಂಡು ಹೋಗಬೇಕು. ಪ್ರಾಣ ಹಾನಿಯಾದರೆ ಯಾರು ಹೊಣೆಯಾಗ್ತಾರೆ. ಇಲ್ಲಿ ಸಿಎಂ ಇದ್ದಾರೆ ಅಂತ ಕ್ಲೋಸ್ ಮಾಡಿದ್ರೆ ಹೇಗೆ.. ಯಾರ ಪ್ರಾಣ ಬೇಕಾದ್ರೂ ಹೋಗಬಹುದಾ ಎಂದು ಮಾಜಿ ಮೇಯರ್ ಆಕ್ರೋಶ ವ್ಯಕ್ತಪಡಿಸಿದರು.
ಬೆಡ್ಗಾಗಿ ಆಹ್ರಹಿಸಿ ಸೋಂಕಿತರನ್ನು ಸಿಎಂ ನಿವಾಸದ ಮುಂದೆ ನಿಲ್ಲಿಸಿದ ಘಟನೆ ನಡೆದ ಹಿನ್ನೆಲೆ ಹಲವು ದಿನಗಳಿಂದ ಸಿಎಂ ನಿವಾಸದ ಮುಂಭಾಗದ ಕುಮಾರಕೃಪಾ ರಸ್ತೆಗೆ ಬ್ಯಾರಿಕೇಡ್ ಹಾಕಲಾಗಿದೆ.