ಬೆಂಗಳೂರು:ರಾಜಧಾನಿಯಲ್ಲಿ ಬಿದ್ದಿರುವ ರಸ್ತೆಗುಂಡಿಗಳನ್ನು ಮುಚ್ಚದ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ ಶುರುವಾಗಿದೆ. ರಸ್ತೆ ಗುಂಡಿಗೆ ಹಲವು ಸವಾರರು ಮೃತಪಟ್ಟಿದ್ದಾರೆ. ಮತ್ತೆ ಬಾಯ್ತೆರೆದು ಬಿದ್ದಿರುವ ರಸ್ತೆಗುಂಡಿಗಳು ವಾಹನ ಸವಾರರ ಜೀವನಕ್ಕೆ ಸಂಚಕಾರ ತಂದಿವೆ. ಹೀಗಾಗಿ, ರಸ್ತೆ ಗುಂಡಿ ಮುಚ್ಚುವವರೆಗೂ ಬಿಬಿಎಂಪಿಗೆ ತೆರಿಗೆ ಪಾವತಿಸದಂತೆ ನಾಗರಿಕರಿಗೆ ಸಿಟಿಜನ್ಸ್ ಗ್ರೂಪ್ ಹಾಗೂ ಈಸ್ಟ್ ಬೆಂಗಳೂರು ಸಂಸ್ಥೆಗಳು ಕರೆ ನೀಡಿವೆ.
ಕಳೆದ ಮುಂಗಾರು ಮತ್ತು ಹಿಂಗಾರು ಮಳೆ ಬಿದ್ದ ಪರಿಣಾಮದಿಂದ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿತ್ತು. ಸ್ಮಾರ್ಟ್‌ಸಿಟಿ, ವೈಟ್‌ಟಾಪಿಂಗ್, ಟೆಂಡರ್‌ಶ್ಯೂರ್, ರಸ್ತೆ ವಿಸ್ತರಣೆ, ಪಾದಚಾರಿ ಅಭಿವೃದ್ಧಿ, ನೆಲದಡಿ ಕೇಬಲ್ ಅಳವಡಿಕೆ, ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಸೇರಿ ಹಲವು ಗೊತ್ತು ಗುರಿಯಿಲ್ಲದ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಬೇಕಾಬಿಟ್ಟಿ ರಸ್ತೆ ಅಗೆಯಲಾಗುತ್ತಿದೆ.
ಕಾಮಗಾರಿ ಮುಗಿದರೂ ಅಗೆದ ರಸ್ತೆಗಳನ್ನು ಡಾಂಬರೀಕರಣ ನಡೆಸದೇ ವರ್ಷಗಟ್ಟಲೆ ಹಾಗೆ ಬಿಡಲಾಗುತ್ತಿದೆ. ಈಗ ನಗರದಲ್ಲಿ ಅಷ್ಟೇನೂ ಮಳೆ ಬಿದ್ದಿಲ್ಲ. ಹೀಗಾಗಿ, ಪ್ರತಿ ನಿತ್ಯ ಜನತೆಗೆ ಧೂಳಿನ ದರ್ಶನದ ಜತೆಗೆ ಭಯದಲ್ಲೇ ಸಂಚರಿಸುವಂತಾಗಿದೆ. ಇದರ ಬಗ್ಗೆ ಗಮನ ಸೆಳೆದರೂ ಸರ್ಕಾರ ಉದಾಸೀನತೆ ತೋರುತ್ತಿದೆ ಎಂದು ಸಿಟಿಜನ್ಸ್ ಗ್ರೂಪ್ ಬೇಸರ ವ್ಯಕ್ತಪಡಿಸಿದೆ.
ಸಂಘಟನೆಗಳ ಸದಸ್ಯರು ತಮ್ಮ ಸ್ವಂತ ಹಣದಿಂದ ಹಾಲ ನಾಯಕನಹಳ್ಳಿಯ ಮುನೇಶ್ವರ ಲೇಔಟ್ ಮತ್ತು ಚೂಡಸಂದ್ರದ 6 ಕಿ.ಮೀ. ಉದ್ದದ ರಸ್ತೆಯಲ್ಲಿ ಬಿದ್ದಿದ ಗುಂಡಿಗಳನ್ನು ಮುಚ್ಚಿಸಿದ್ದಾರೆ. ಗುಂಡಿಗಳನ್ನು ಮುಚ್ಚುವಂತೆ ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ವಿಚಾರದಲ್ಲಿ ಬಿಬಿಎಂಪಿಯು ಅಸಡ್ಡೆ ಹೊಂದಿದೆ ಎಂದು ಸಂಘಟನೆ ಸದಸ್ಯ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.