ಬೆಂಗಳೂರು :ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಬಡ ರೈತರ ಮತ್ತು ಗೇಣಿದಾರರ ಹಿತ ಕಾಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಭುಸುಧಾರಣಾ ಕಾಯ್ದೆ 1964ರ ಸೆಕ್ಷನ್ 79(ಎ), 79 (ಬಿ) ನಿಯಮಗಳನ್ನು ಕೈಬಿಟ್ಟು ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವ ಸರ್ಕಾರದ ವಿರುದ್ಧ ರೈತರು ಹಾಗೂ ಕಾನೂನು ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರದ ಕ್ರಮ ರೈತರ ಕತ್ತು ಕೊಯ್ಯುವ ರೀತಿಯಲ್ಲಿದೆ. ಕೊರೊನಾ ಸಂಕಷ್ಟದಂತಹ ಕಾಲದಲ್ಲಿ ಜನರ ಸಮಸ್ಯೆಗಳೇ ನೂರಾರಿವೆ. ಅವೆಲ್ಲವನ್ನೂ ಬದಿಗಿಟ್ಟು ಬಂಡವಾಳಶಾಹಿಗಳಿಗೆ, ಭೂಮಾಫಿಯಾದ ಕುಳಗಳಿಗೆ ರೈತರ ಭೂಮಿ ಕಿತ್ತುಕೊಡಲು ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಇಷ್ಟು ಸಾಲದೆಂಬಂತೆ ಅಕ್ರಮವಾಗಿ ಭೂಮಿ ಖರೀದಿ ಮಾಡಿದ್ದವರ ವಿರುದ್ಧ ದಾಖಲಿಸಿದ್ದ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಡಲು ಸರ್ಕಾರ ಆದೇಶಿಸಿದೆ. ಇವೆಲ್ಲವೂ ಜನಪರ ಸರ್ಕಾರದ ನೀತಿಗಳಲ್ಲ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಗ್ರೀವಾಜ್ಞೆ ಕುರಿತು ಕಾನೂನು ತಜ್ಞರು, ರಾಜ್ಯ ಹೈಕೋರ್ಟ್ನ ಹಿರಿಯ ನ್ಯಾಯವಾದಿಗಳೂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರು ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಸಂವಿಧಾನ ವಿರೋಧಿ ಎಂದಿದ್ದಾರೆ. ಜನಪರವಲ್ಲದ ಕಾನೂನನ್ನು ಕೊರೊನಾ ತುರ್ತು ಪರಿಸ್ಥಿತಿಯಂತ ಸಂದರ್ಭದಲ್ಲಿ ಯಾವುದೇ ಚರ್ಚೆ ನಡೆಸದೆ ಏಕಾಏಕಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದಿದ್ದಾರೆ.
ಪೊನ್ನಣ್ಣ ಅವರು ಹೇಳುವಂತೆ, ಸಂವಿಧಾನದ ವಿಧಿಗಳ ಪ್ರಕಾರ ಯಾವುದೇ ಒಂದು ಸರ್ಕಾರ ಕಾನೂನು ರೂಪಿಸಬೇಕಾದರೆ ಅಥವಾ ತಿದ್ದುಪಡಿ ಮಾಡಬೇಕಿದ್ದರೆ ಅದನ್ನು ವಿಧಾನಸಭೆಗಳಲ್ಲಿ ಅಥವಾ ಸಂಸತ್ತಿನಲ್ಲಿ ಚರ್ಚಿಸಿಯೇ ಜಾರಿ ಮಾಡಬೇಕು. ಒಂದು ವೇಳೆ ವಿಧಾನಸಭೆ ಅಥವಾ ಸಂಸತ್ತು ಅಧಿವೇಶನ ಇಲ್ಲದಿದ್ದ ಸಂದರ್ಭದಲ್ಲಿ ಕಾನೂನು ಜಾರಿ ಮಾಡುವ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಅಂಕಿತದ ಮೇರೆಗೆ ಸುಗ್ರೀವಾಜ್ಞೆ ಜಾರಿ ಮಾಡಬಹುದು.