ಬೆಂಗಳೂರು :ರಾಜಧಾನಿಯ ಹೊರವರ್ತುಲ ರಸ್ತೆಗಳು ಸಾರ್ವಜನಿಕರ ಪಾಲಿಗೆ ಡೇಂಜರ್ ಆಗಿ ಪರಿಣಮಿಸಿವೆ. ಸಂಚಾರ ದಟ್ಟಣೆ ಕಡಿವಾಣ ಹಾಕಲು ಪರ್ಯಾಯವಾಗಿ ನಿರ್ಮಿಸಲಾಗಿದ್ದ ರಸ್ತೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 117 ಅಪಫಾತಗಳು ಸಂಭವಿಸಿದ್ದು, 76 ಮಂದಿ ಬಲಿಯಾಗಿದ್ದಾರೆ.
ನಗರದಲ್ಲಿ ಹೊರವರ್ತುಲ ರಸ್ತೆಗಳ ವ್ಯಾಪ್ತಿ ಸುಮಾರು 60 ಕಿಲೋಮೀಟರ್ ಇದೆ. ಗೊರಗುಂಟೆಪಾಳ್ಯ, ಹೆಬ್ಬಾಳ, ನಾಗವಾರ, ಟಿನ್ ಫ್ಯಾಕ್ಟರಿ, ಮಾರತ್ ಹಳ್ಳಿ, ಸಿಲ್ಕ್ ಬೋರ್ಡ್, ಹೊಸಕೆರೆಹಳ್ಳಿ ಸೇರಿದಂತೆ ಹಲವು ಸುತ್ತಮುತ್ತಲಿನ ರಸ್ತೆಗಳು ಔಟರ್ ರಿಂಗ್ ರಸ್ತೆ ವ್ಯಾಪ್ತಿಗೆ ಬರಲಿವೆ. ಇಲ್ಲಿ ಮೂರು ವರ್ಷಗಳಲ್ಲಿ 117 ಅಪಘಾತ ಸಂಭವಿಸಿದ್ದು, 76 ಮಂದಿ ಬಲಿಯಾಗಿದ್ದಾರೆ. ಒಟ್ಟಾರೆಯಾಗಿ ಸಂಚಾರ ಪೊಲೀಸರು ಗುರುತಿಸಿದ 59 ಬ್ಲಾಕ್ ಸ್ಪಾಟ್ ಗಳಲ್ಲಿ ಮೂರು ವರ್ಷಗಳಲ್ಲಿ 755 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 326 ಮಂದಿ ಬಲಿಯಾಗಿದ್ದಾರೆ.
ಮೃತ್ಯುಕೂಪವಾಗಿರುವ ಹೊರವರ್ತುಲ ರಸ್ತೆಗಳು :ಸಂಭವಿಸಿದ ಅತಿ ಹೆಚ್ಚು ಅಪಘಾತಗಳು ಹೊರವರ್ತುಲ ರಸ್ತೆಗಳಲ್ಲೇ ನಡೆದಿವೆ. ಎರಡನೇ ಸ್ಥಾನದಲ್ಲಿ ಕೆಂಪೇಗೌಡ ಏರ್ ಪೋರ್ಟ್ ರಸ್ತೆಯಿದೆ. ಹೆಬ್ಬಾಳದಿಂದ ಯಲಹಂಕ, ಚಿಕ್ಕಜಾಲ, ಟ್ರಂಪೆಟ್ ಜಂಕ್ಷನ್ ವರೆಗೂ ಸುಮಾರು 26 ಕಿ.ಮೀ ಗಳಿದ್ದು, ಈ ರಸ್ತೆಗಳಲ್ಲಿ 13 ಬ್ಲಾಕ್ಸ್ಪಾಟ್ಗಳನ್ನ ಟ್ರಾಫಿಕ್ ಪೊಲೀಸರು ಗುರುತಿಸಿದ್ದಾರೆ. ಇಲ್ಲಿ 131 ಅಪಘಾತಗಳು ನಡೆದಿದ್ದು, ಈ ಪೈಕಿ 65 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ-ಅಂಶಗಳೇ ದೃಢೀಕರಿಸಿವೆ.
ರಾತ್ರಿ ವೇಳೆ ಅಪಘಾತ ಹೆಚ್ಚು :ನಗರದ ಒಳವರ್ತುಲ ರಸ್ತೆಗಳಲ್ಲಿ ಹೆಚ್ಚಾಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡಲು ಹೊರವರ್ತುಲ ರಸ್ತೆ ನಿರ್ಮಿಸಲಾಗಿತ್ತು. ಕಾಲ ಕ್ರಮೇಣ ಬೆಂಗಳೂರು ಬೆಳೆಯುತ್ತಿದ್ದಂತೆ ವಾಹನ ಸಂಚಾರ ದಟ್ಟಣೆ ಅಧಿಕವಾಗತೊಡಗಿತು. ದಿನಕ್ಕೆ ಲಕ್ಷಾಂತರ ವಾಹನಗಳು ಇದೇ ರಸ್ತೆಗಳಲ್ಲಿ ಸಂಚಾರ ನಡೆಸುತ್ತಿದೆ. ಹಗಲಿನಲ್ಲಿ ಸಂಚಾರ ದಟ್ಟಣೆ ಅಧಿಕ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಹೆಚ್ಚು ಅಪಘಾತಗಳಾಗಿವೆ. ನಮ್ಮ ಮೆಟ್ರೊ ಕಾಮಗಾರಿ ಸೇರಿ ವಿವಿಧ ರೀತಿಯ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಭಾರಿ ತೂಕದ ವಾಹನಗಳ ಚಾಲನೆ ಹೆಚ್ಚು ಇರುವುದರಿಂದ ಆಕ್ಸಿಡೆಂಟ್ ಗಳು ಹೆಚ್ಚಾಗಿವೆ. ಮದ್ಯಸೇವನೆ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ಚಾಲನೆ, ಅವೈಜ್ಞಾನಿಕ ರಸ್ತೆ, ಅನಗತ್ಯ ಕಡೆಗಳಲ್ಲಿ ಉಬ್ಬು ನಿರ್ಮಾಣದಿಂದಾಗಿ ಹೆಚ್ಚು ಅಪಘಾತಗಳು ಸಂಭವಿಸಿವೆ.