ಬೆಂಗಳೂರು: ಮೊದಲ ಬಾರಿಗೆ ಹಿಂದುಳಿದ ಆಯೋಗದಿಂದ ಬಹಿರಂಗ ವಿಚಾರಣೆಗೆ ಕರೆದಿದ್ದು, ನಮ್ಮ ನಿರಂತರ ಹೋರಾಟಕ್ಕೆ ನೈತಿಕ ಶಕ್ತಿ ಸಿಕ್ಕಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದಿಂದ ಇಂದು ಪಂಚಮಸಾಲಿ ಮೀಸಲಾತಿ ಕುರಿತಾದ ಬಹಿರಂಗ ವಿಚಾರಣೆಯು ನಗರದ ದೇವರಾಜ್ ಅರಸ್ ಭವನದಲ್ಲಿ ನಡೆಯಿತು. ಆಯೋಗದ ಕಾಯ್ದೆಗಳ ಅನ್ವಯವೇ ವಿಚಾರಣೆಯನ್ನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಸದಸ್ಯರಾದ ರಾಜಶೇಖರ್, ಅರುಣ್ ಕುಮಾರ್, ಕಲ್ಯಾಣ್ ಕುಮಾರ್ ಸಮ್ಮುಖದಲ್ಲಿ ನಡೆಯಿತು. ಕೋರ್ಟ್ನಲ್ಲಿ ನಡೆಯುವ ರೀತಿಯಲ್ಲೇ ನಡೆದ ಈ ವಿಚಾರಣೆಯಲ್ಲಿ ಸಂಬಂಧಿಸಿದ ಪ್ರತಿನಿಧಿಗಳು ಮಾತ್ರ ಮಾತನಾಡಬೇಕು ಎಂಬುದಾಗಿ ಅಧ್ಯಕ್ಷರು ಸೂಚನೆ ನೀಡಿದರು.
ಬಹಿರಂಗ ವಿಚಾರಣೆಯಲ್ಲಿ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ಸಮಾಜ ಸಂಖ್ಯೆಯಲ್ಲಿ ದೊಡ್ಡದು. ಆದ್ರೆ ಸಾಮಾಜಿಕವಾಗಿ ನಮ್ಮ ಸಮಾಜ ಹಿಂದುಳಿದಿದೆ. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು. ನಮ್ಮೊಳಗಿನ ಮೌಢ್ಯತೆ, ಅಲ್ಪತೃಪ್ತಿಯಿಂದಾಗಿ ಹಿಂದುಳಿದಿದ್ದೇವೆ. ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯ ಪ್ರಬಲವಾಗಿದೆ. ಉನ್ನತ ಶಿಕ್ಷಣ ಪಡೆಯಲು ನಮ್ಮ ಸಮುದಾಯಕ್ಕೆ ಸಾಧ್ಯವಾಗಿಲ್ಲ. 26 ವರ್ಷಗಳಿಂದಲೂ ನಮ್ಮ ಮೀಸಲು ಹೋರಾಟ ನಡೆಯುತ್ತಾ ಬಂದಿದ್ದು, ಕಳೆದ 24 ವರ್ಷಗಳಿಂದ ಮನವಿ ಪತ್ರ ನೀಡಲಾಗಿದೆ. ಸಾಮಾಜಿಕ ಶೋಷಣೆಗೆ, ತುಳಿತಕ್ಕೆ ಪಂಚಮಸಾಲಿ ಸಮುದಾಯ ಒಳಗಾಗಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ ಅಂತ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿದರು.
ಬಹಿರಂಗ ಸಭೆಯ ನಂತರ ಪ್ರತಿಕ್ರಿಯಿಸಿದ ಜಯಮೃತ್ಯುಂಜಯ ಸ್ವಾಮೀಜಿ, ಮೊದಲ ಬಾರಿಗೆ ಹಿಂದುಳಿದ ಆಯೋಗದಿಂದ ಬಹಿರಂಗ ವಿಚಾರಣೆ ಕರೆದಿದ್ದು, ನಮ್ಮ ನಿರಂತರ ಹೋರಾಟಕ್ಕೆ ನೈತಿಕ ಶಕ್ತಿ ಸಿಕ್ಕಿದೆ. ನಮ್ಮ ಹಿರಿಯ ನ್ಯಾಯವಾದಿ ದಿನೇಶ್ ಪಾಟೀಲ್ ಉತ್ತಮವಾಗಿ ವಾದ ಮಂಡಿಸಿದ್ದಾರೆ. ಸರ್ಕಾರವು ಕಾನೂನು ಪ್ರಕ್ರಿಯೆ ವರದಿ ಬಂದ ಬಳಿಕ ಮಾಡುವುದಾಗಿ 6 ತಿಂಗಳ ಸಮಯಾವಕಾಶ ತೆಗೆದುಕೊಂಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸ್ಪಷ್ಟ ವರದಿ ಬರುವ ನಿರೀಕ್ಷೆ ಇದೆ ಎಂದರು.
ನಾಳೆಯಿಂದ ಲಿಂಗಾಯತ ಪಂಚಮಸಾಲಿ ಮಹಾಪೀಠ ಕೂಡಲ ಸಂಗಮದ ವತಿಯಿಂದ ಜಾಥಾ ಆಯೋಜನೆ ಮಾಡಲಾಗಿದ್ದು, ಬೆಂಗಳೂರಿನಿಂದ ಬಾಗಲಕೋಟೆಯವರೆಗೆ ಜಾಥ ನಡೆಸುತ್ತಿದ್ದೇವೆ. ಪಾದಯಾತ್ರೆಯಲ್ಲಿ ಭಾಗಿಯಾದವರಿಗೆ ಧನ್ಯವಾದ ಹೇಳುತ್ತಾ ಸಾಗುತ್ತೇವೆ. ಇದರಲ್ಲಿ ಸಮಾಜದವರು ಯಾರೂ ಬೇಕಾದ್ರೂ ಭಾಗವಹಿಸಬಹುದು ಎಂದು ಕರೆ ನೀಡಿದರು.
ನಾಳೆಯ ಜಾಥಕ್ಕೆ ಆಹ್ವಾನವೂ ಇಲ್ಲ; ನಾನು ಭಾಗಿಯಾಗುವುದು ಇಲ್ಲ: ವಚನಾನಂದ ಸ್ವಾಮೀಜಿ