ಬೆಂಗಳೂರು: ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಅವರ ಪರ ನ್ಯಾಯಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಪ್ರತಿಭಟನೆ ಮಾಡೋದು ನಮ್ಮ ಹಕ್ಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮನೆಯಿಂದ ಹೊರಬರುವ ಮುಂಚೆಯೇ ಅವರನ್ನು ಪೊಲೀಸರು ಅರೆಸ್ಟ್ ಮಾಡಲು ಹೋಗಿದ್ದರು. ಪೊಲೀಸರಿಗೆ ಜವಾಬ್ದಾರಿ ಬೇಡವಾ? ಪ್ರತಿಭಟನೆಗೆ ಹೋಗಲೇಬಾರದು ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಕಚೇರಿಯೇ ನಮಗೆ ಮನೆ, ದೇವಸ್ಥಾನ:ನಮಗೆ ನಮ್ಮ ಕಚೇರಿಯೇ ನಮ್ಮ ಮನೆ, ದೇವಸ್ಥಾನ. ಹೆಚ್.ಕೆ.ಪಾಟೀಲ್, ಡಿ.ಕೆ. ಸುರೇಶ್, ದಿನೇಶ್ ಗುಂಡೂರಾವ್ ಕಚೇರಿಗೆ ಹೋದ್ರೆ ಬಂಧನ ಮಾಡಿದ್ದಾರೆ. ಏನಿದು ಅನ್ಯಾಯ, ಅವರೇನು ಕ್ರೈಂ ಮಾಡಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪ್ರತಿಭಟನೆ ವೇಳೆ ಡಿಕೆ ಸುರೇಶ್ ತಳ್ಳಿ ವ್ಯಾನ್ ಹತ್ತಿಸಿದ ಪೊಲೀಸರು
ನೋಟಿಸ್ ನೀಡಿದ್ರೆ ಭಯ ಯಾಕೆ ಎಂಬ ಬಿಜೆಪಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, 10 ಗಂಟೆ ವಿಚಾರಣೆ ಯಾಕೆ? ಚುನಾವಣೆ ಅಫಿಡಿವಿಡ್ನಲ್ಲಿ ಕೊಟ್ಟಿಲ್ಲವಾ? ನಾನೇನು ಮಾಡಬಾರದು ಮಾಡಿಬಿಟ್ಟಿದ್ದೆ. ಹತ್ತು ದಿನ ನನ್ನ ವಿಚಾರಣೆ ಮಾಡಬೇಕಾ? ನಾನು ಇನ್ನೂ ಕೆಲ ವಿಚಾರ ಮಾತನಾಡಿಲ್ಲ. ಯಾವ ಯಾವ ರೀತಿಯಲ್ಲಿ ಕಿರುಕುಳ ಕೊಟ್ಟಿದ್ದಾರೆ ಎಂದು ಹೇಳಿಲ್ಲ. ರೇಡ್ ಆದಾಗ ಬಿಜೆಪಿಯವರದ್ದು ಯಾರ ಯಾರದ್ದು ಏನು ಆಯಿತು. ಎಷ್ಟೆಷ್ಟು ಹಣ ಸಿಕ್ತು?. ಯಾಕೆ ಇಡಿಗೆ ಕೇಸ್ ಹೋಗಿಲ್ಲ ಎಂದು ಕೇಳಿದರು.
ರಾಹುಲ್, ಸೋನಿಯಾ ಯಾವುದಕ್ಕೂ ಜಗ್ಗಲ್ಲ: ಇದೇನು ಎಮರ್ಜೆನ್ಸಿನಾ, ಪ್ರಜಾಪ್ರಭುತ್ವ ಸರ್ಕಾರನಾ? ಅವರ ನೋವು, ದುಃಖವನ್ನು ಪ್ರತಿಭಟನೆ ಮೂಲಕ ವ್ಯಕ್ತಪಡಿಸ್ತಾರೆ. ಇಂಥ ನೀಚ ರಾಜಕಾರಣ ಎಲ್ಲೂ ನೋಡಿಲ್ಲ. ರಾಹುಲ್ ಗಾಂಧಿ, ಸೋನಿಯಾಗಾಂಧಿ ಯಾವುದಕ್ಕೂ ಜಗ್ಗಲ್ಲ. ಅದು ರಾಷ್ಟ್ರದ ಆಸ್ತಿ, ಸ್ವಂತದ್ದಲ್ಲ. ಅವ್ರನ್ನು ಏನಾದ್ರೂ ಮಾಡಿ ಮನೆಗೆ ಸೇರಿಸಬೇಕು ಎಂದುಕೊಂಡಿದ್ದಾರೆ ಎಂದರು.