ಬೆಂಗಳೂರು: ರಾಜ್ಯದಲ್ಲಿ ಉದ್ಯಮ ಸ್ಥಾಪನೆ ಸೇರಿದಂತೆ ರಾಜ್ಯಾದ್ಯಂತ ಉದ್ಯಮ ವಿಸ್ತರಣೆ ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬುಧವಾರ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಲಾಗಿದ್ದ ಸಿಐಐ ವಾರ್ಷಿಕ ಸಭೆ- ಇಂಡಿಯಾ @75 ನಲ್ಲಿ ವರ್ಚುಯಲ್ ಆಗಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಎನಿಸಿದೆ. ಸ್ವಾತಂತ್ರ್ಯ ನಂತರದಲ್ಲಿ ಕೌಶಲ್ಯ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ವಿದೇಶಿ ಸಹಯೋಗಕ್ಕೆ ಅತ್ಯಂತ ಭದ್ರವಾದ ಬುನಾದಿಯನ್ನು ಹಾಕಲಾಗಿದೆ. ಇಡೀ ರಾಜ್ಯದಲ್ಲಿ ಉದ್ಯಮಶೀಲತೆ ವಿಸ್ತರಿಸುವುದು ನಮ್ಮ ಸರ್ಕಾರದ ಗುರಿ ಎಂದು ಹೇಳಿದರು.
ರಾಜ್ಯವನ್ನು ಬೆಳವಣಿಗೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಒಟ್ಟಾರೆ ಸಂಪನ್ಮೂಲಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲಾಗುವುದು. ವ್ಯವಸ್ಥೆಗಿಂತ ರಾಜ್ಯದ ಜನರು ಶ್ರೀಮಂತವಾಗಿರಬೇಕು ಎನ್ನುವುದು ನನ್ನ ಆಶಯ. ಶಿಕ್ಷಣ, ಕೌಶಲ್ಯ ಮತ್ತು ಉದ್ಯಮಶೀಲತೆಯ ಮೂಲಕ ಮಾನವ ಸಂಪನ್ಮೂಲವನ್ನು ಸಶಕ್ತಗೊಳಿಸಬೇಕು. ಪ್ರಾದೇಶಿಕ ಅಸಮಾನತೆಯ ನಿವಾರಣೆ ನಮ್ಮ ಆದ್ಯತೆಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.