ಬೆಂಗಳೂರು:ರಾಜ್ಯದ ನಾಲ್ವರು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಸದಾನಂದಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ ನಿಧನದಿಂದ ತೆರವಾದ ಸ್ಥಾನಕ್ಕೆ ಭಗವಂತ ಖೂಬಾರನ್ನು ನೇಮಿಸಲಾಗಿದೆ. ರಾಜ್ಯಕ್ಕೆ ಹೆಚ್ಚುವರಿಯಾಗಿ ನಾರಾಯಣಸ್ವಾಮಿ ಮತ್ತು ರಾಜೀವ್ ಚಂದ್ರಶೇಖರ್‌ಗೆ ಅವಕಾಶ ನೀಡಲಾಗಿದೆ.
ಸಂಘ ಪರಿವಾರದಿಂದ ಬಂದ ಶೋಭಾ ಕರಂದ್ಲಾಜೆ:
1966 ರ ಅಕ್ಟೋಬರ್ 23 ರಂದು ಉಡುಪಿ ಜಿಲ್ಲೆಯ ಪುತ್ತೂರಿನಲ್ಲಿ ಮೋನಪ್ಪಗೌಡ, ಪೂವಕ್ಕ ದಂಪತಿ ಪುತ್ರಿಯಾಗಿ ಜನಿಸಿದ ಶೋಭಾ ಕರಂದ್ಲಾಜೆ ಆರ್ಎಸ್ಎಸ್ನಿಂದ ಪ್ರಭಾವಿತರಾಗಿ ಸಂಘ ಪರಿವಾರ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದರು.1994 ರಲ್ಲೇ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರೂ, 2004 ರಲ್ಲಿ ವಿಧಾನ ಪರಿಷತ್ ಗೆ ಆಯ್ಕೆಯಾಗುವ ಮೂಲಕ ಚುನಾವಣಾ ರಾಜಕೀಯ ಪ್ರವೇಶ ಮಾಡಿದರು.
2008 ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವೆಯಾಗಿ ಕೆಲಸ ಮಾಡಿದರು. 2008 ರಲ್ಲಿ ಮೊದಲ ಬಾರಿ ಸಚಿವ ಸ್ಥಾನ ಸಿಕ್ಕಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಿ ಹೆಸರು ಪಡೆದಿದ್ದರು. ಆದರೆ 2009 ರಲ್ಲಿ ಅಂದು ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಡಲಾಯಿತು.
ಇದನ್ನೂ ಓದಿ:ಕರಂದ್ಲಾಜೆ, ಖೂಬಾ, ನಾರಾಯಣಸ್ವಾಮಿ ಸೇರಿ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ವರ್ಷದಲ್ಲೇ ಮತ್ತೆ ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾದ ಶೋಭಾ ಕರಂದ್ಲಾಜೆ ಇಂಧನ ಇಲಾಖೆ ಸಚಿವೆಯಾಗಿ ಕೆಲಸ ಮಾಡಿದರು. ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಜೆಪಿ ಕಟ್ಟಿದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಗುಡ್ ಬೈ ಹೇಳಿ ಬಿಎಸ್ವೈ ಹಿಂದೆ ನಡೆದಿದ್ದರು. ನಂತರ ಕೆಜೆಪಿಯಿಂದ ಸೋತರೂ ಕೂಡ ಯಡಿಯೂರಪ್ಪ ಜೊತೆಯಲ್ಲಿಯೇ ಬಿಜೆಪಿಗೆ ಮರಳಿ 2014 ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದರು. 2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮರು ಆಯ್ಕೆಯಾಗಿದ್ದಾರೆ. ಸಂಸದೆಯಾದ ಬಳಿಕ ಇವರು ಮಹಿಳಾ ಸಬಲೀಕರಣ ಸಮಿತಿ ಸದಸ್ಯೆ, ರಕ್ಷಣಾ ಸ್ಥಾಯಿ ಸಮಿತಿ ಸದಸ್ಯೆ ಮತ್ತು ಸಲಹಾ ಸಮಿತಿ ಸದಸ್ಯೆ, ಜಮೀನು ಸ್ವಾಧೀನದಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆ ಜಂಟಿ ಸಮಿತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.
ಎಂಜಿನಿಯರ್ ಆಗಿದ್ದ ಭಗವಂತ ಖೂಬಾ:
1967 ರ ಜೂನ್ 1 ರಂದು ಗುರುಬಸಪ್ಪ ಖೂಬಾ ಮತ್ತು ಶೀಲಾ ಖೂಬಾ ದಂಪತಿ ಪುತ್ರನಾಗಿ ಬೀದರ್ ಜಿಲ್ಲೆ ಔರಾದ್ ನಲ್ಲಿ ಜನಿಸಿದ ಭಗವಂತ ಖೂಬಾ, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು ತುಮಕೂರಿನ ಸಿದ್ಧಗಂಗಾ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ತಮ್ಮ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
2014 ರ ಚುನಾವಣೆಯಲ್ಲಿ ಮಾಜಿ ಸಿಎಂ ಧರಂಸಿಂಗ್ ವಿರುದ್ಧ ಗೆಲುವು ಪಡೆದು ಮೊದಲ ಬಾರಿ ಸಂಸತ್ ಪ್ರವೇಶ ಮಾಡಿದರು.
2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮರು ಆಯ್ಕೆ ಆಗಿ ಎರಡನೇ ಬಾರಿ ಸಂಸತ್ ಸದಸ್ಯರಾಗಿದ್ದಾರೆ. ಆಹಾರ, ಗ್ರಾಹಕ ವ್ಯವಹಾರ ಮತ್ತು ಪಡಿತರ ಸರಬರಾಜು ಸ್ಥಾಯಿ ಸಮಿತಿ ಸದಸ್ಯ, ಲೋಕಸಭೆ ಸದಸ್ಯರಿಗೆ ಕಂಪ್ಯೂಟರ್ ನೀಡಲು ಪರಾಮರ್ಶೆ ಸಮಿತಿ ಸದಸ್ಯರಾಗಿದ್ದರು. ರೈಲ್ವೆ ಖಾತೆ ಸಲಹಾ ಸಮಿತಿ ಸದಸ್ಯರಾಗಿ ಕೆಲಸ, ಯೋಜನೆ ಮತ್ತು ಆರ್ಕಿಟೆಕ್ಚರ್ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ಕೆಲಸ ಮಾಡಿದ್ದಾರೆ.