ಕರ್ನಾಟಕ

karnataka

ETV Bharat / state

ಮೋದಿ ಕೈಬಲಪಡಿಸುವುದಕ್ಕೆ 'ಹಿಂದ' ಸ್ಥಾಪನೆ: ಹಿಂದುಳಿದ ದಲಿತ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮುಕುಡಪ್ಪ - ಗೋಹತ್ಯೆ ನಿಷೇಧಕ್ಕೆ ಬೆಂಬಲ

ಭಾರತದ ಸ್ವಾತಂತ್ರ್ಯ ಹೋರಾಟ ಎಂದರೆ ಕೇವಲ ಕಾಂಗ್ರೆಸ್ಸಿಗರು ಮಾತ್ರ ಎಂದು ಪದೆ ಪದೇ ಸುಳ್ಳು ಹೇಳಿ ಬಿಂಬಿಸಲಾಗುತ್ತಿದೆ ಎಂದು ಹಿಂದುಳಿದ ದಲಿತ ಸಮುದಾಯಗಳ ಒಕ್ಕೂಟ ರಾಜ್ಯಾಧ್ಯಕ್ಷ ಕೆ ಮುಕುಡಪ್ಪ ಹೇಳಿದ್ದಾರೆ.

ಹಿಂದುಳಿದ ದಲಿತ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮುಕುಡಪ್ಪ
ಹಿಂದುಳಿದ ದಲಿತ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮುಕುಡಪ್ಪ

By

Published : Sep 28, 2022, 5:40 PM IST

ಬೆಂಗಳೂರು: ಹಿಂದುಳಿದ ಮತ್ತು ದಲಿತ ಸಮುದಾಯದ ಜನರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಮಹನಿಯರ ತ್ಯಾಗ ಬಲಿದಾನ ತಿಳಿಸಲಾಗುವುದು. ದೇಶದ ಭದ್ರತೆ, ಐಕ್ಯತೆಗಾಗಿ ಬಿಜೆಪಿ ಬೆಂಬಲಿಸುವಂತೆ ರಾಜ್ಯದ ಎಲ್ಲ ಸಮದಾಯದ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಾವೇಶ ನಡೆಸುವ ಉದ್ದೇಶದಿಂದ ಹಿಂದುಳಿದ ದಲಿತ ಸಮುದಾಯಗಳ ಒಕ್ಕೂಟ (ಹಿಂದ) ಸ್ಥಾಪನೆ ಮಾಡಿ, ಮೋದಿ ಕೈಬಲಪಡಿಸುವುದೇ ನಮ್ಮ ಐಕ್ಯತೆಯ ಧ್ಯೇಯ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಕೆ ಮುಕುಡಪ್ಪ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಕುಡಪ್ಪ, ಭಾರತದ ಸ್ವಾತಂತ್ರ್ಯ ಹೋರಾಟ ಎಂದರೆ ಕೇವಲ ಕಾಂಗ್ರೆಸ್ಸಿಗರು ಮಾತ್ರ ಎಂದು ಪದೆ ಪದೇ ಸುಳ್ಳು ಹೇಳಿ ಬಿಂಬಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಎಲ್ಲಾ ಜನರು ಭಾಗವಹಿಸಿದ್ದರು. ಆದರೆ, ಅದರ ಲಾಭವನ್ನು ಮಾತ್ರ ಕಾಂಗ್ರೆಸಿಗರು ಪಡೆದರು ಎಂದು ಆರೋಪಿಸಿದರು.

ಸಾವರ್ಕರ್ ತನ್ನ 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟದ ಬಗ್ಗೆ ಲೇಖನ ಬರೆಯುತ್ತಿದ್ದರು. 19ನೇ ವರ್ಷಕ್ಕೆ ಹಸ್ತಲಿಖಿತ ವಾರಪತ್ರಿಕೆ ಪ್ರಾರಂಭ ಮಾಡಿ ಸ್ವಾತಂತ್ರ್ಯ ಚಳವಳಿಯ ಕಿಚ್ಚು ಹೊತ್ತಿಸಿದರು ಎಂದು ಹೇಳಿದರು.

ಕೇವಲ ಅಧಿಕಾರಕ್ಕಾಗಿ ಹೋರಾಟ: ಈಗ ಸಿದ್ದರಾಮಯ್ಯ ಹೋರಾಟ ಮಾಡುತ್ತಿದ್ದಾರೆ. ಅದು ಕೇವಲ ಅಧಿಕಾರಕ್ಕಾಗಿ ಮಾತ್ರವೇ ಹೊರತು ಮತ್ತಾವುದೇ ಕಾಳಜಿಯಿಂದಲ್ಲ ಎಂದು ಕುಟುಕಿದರು.

ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ:ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಇದೇ ಕಾಂಗ್ರೆಸ್ ಕಾರಣ. ಅವರಿಗೆ ಭಾರತ ರತ್ನ ನೀಡಲು ಹಿಂದೆ ಮುಂದೆ ನೋಡಿದ್ದರು. ಅಂತ್ಯ ಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಹಿಂದಿನಿಂದಲೂ ಅಂಬೇಡ್ಕರ್ ಪರ ಇಲ್ಲದ ಕಾಂಗ್ರೆಸ್, ಈಗೇಕೆ ಅವರ ಬಗ್ಗೆ ಮಾತನಾಡುತ್ತಿದೆ ಎಂದು ಪ್ರಶ್ನಿಸಿದರು.

ನಗರದಲ್ಲಿ ಹಿಂದ ಸಮಾವೇಶ:'ಹಿಂದ' ವತಿಯಿಂದ ಮುಂದಿನ ಹಂತದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದ ಮತ್ತು ದಲಿತ ಸಮಾಜಕ್ಕೆ ನ್ಯಾಯ ಕೊಡಿಸುವ ಸಲುವಾಗಿ ಹೋರಾಟ ಶುರು ಮಾಡುತ್ತೇವೆ. ರಾಜ್ಯಾದ್ಯಂತ ವಿಭಾಗವಾರು ಸಮಾವೇಶ ಮಾಡಿ ನಂತರ ಬೆಂಗಳೂರಿನಲ್ಲಿ ಸಮಾವೇಶ ಮಾಡಲಾಗುವುದು. ಮೀಸಲಾತಿ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಹೊಸಬರಿಗೆ ಅವಕಾಶಕ್ಕಾಗಿ ಆಗ್ರಹ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಮುಂದಿನ ನಡೆ ಬಿಜೆಪಿ ಬೆಂಬಲಿಸುವುದಾಗಿದೆ. ಈಬಾರಿಯ ಚುನಾವಣೆಯಲ್ಲಿ ಶೇಕಡಾ 10ರಷ್ಟು ಹೊಸಬರಿಗೆ ಅವಕಾಶ ನೀಡಬೇಕು. ಉಳಿದಂತೆ ಮೀಸಲಾತಿಗೆ ಅನುಗುಣವಾಗಿ ಟಿಕೆಟ್ ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಅಥವಾ ತಮಿಳುನಾಡು ಮಾದರಿ ಶೇಕಡಾ 65ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಎಂದು ಆಗ್ರಹಿಸಿದರು.

ಬಿಜೆಪಿ ಪರವಾಗಿ ಪ್ರಚಾರ: ಹಿಂದ ಸಂಘಟನೆ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಾಗುವುದು ಎಂದರು.

ಗೋಹತ್ಯೆ ನಿಷೇಧಕ್ಕೆ ಬೆಂಬಲ: ದೇಶದಲ್ಲಿ ಕಾಮನ್ ಸಿವಿಲ್ ಕೋಡ್ ಜಾರಿಗೆ ತರಬೇಕು. ಜತೆಗೆ ಸರ್ಕಾರ ಗೋಹತ್ಯೆ ನಿಷೇಧ ಮಾಡಿರುವುದಕ್ಕೆ ನಮ್ಮ ಬೆಂಬಲ ಇದೆ ಎಂದು ಮುಕುಡಪ್ಪ ತಿಳಿಸಿದರು.

ಓದಿ:ಪಿಎಫ್ಐ ಸಂಘಟನೆ ನಿಷೇಧಕ್ಕೆ ನಡೆಸಿದ ಹೋರಾಟದ ಫಲ ಈಗ ಲಭ್ಯವಾಗಿದೆ: ಬಿ ಎಸ್ ಯಡಿಯೂರಪ್ಪ

ABOUT THE AUTHOR

...view details