ಮಂಗಳೂರು/ ದೇವನಹಳ್ಳಿ: ಯೋಗಾಸನ ಮಾಡುವಾಗ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಅವರ ಮೃತ ದೇಹವನ್ನು ಇಂದು ಮಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತರಲಾಯಿತು.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರದ ತರಲಾಗಿದೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ ಅವರು, ನಮ್ಮ ಪಕ್ಷದಲ್ಲಿ ಮಂತ್ರಿ ಆಗಿದ್ದವರು, ರಾಜ್ಯಸಭಾ ಸದಸ್ಯರು ಕೂಡ ಆಗಿದ್ದರು. ರಾಜಕಾರಣದಲ್ಲಿ ಅವರು ಅಜಾತ ಶತ್ರು. ನಾಳೆ ಬೆಳಗ್ಗೆ 10 ರಿಂದ 12 ಗಂಟೆವರೆಗೂ ಕಾಂಗ್ರೆಸ್ ಕಚೇರಿಯಲ್ಲಿ ದರ್ಶನಕ್ಕೆ ಇಡಲಾಗುವುದು. ಅದಾದ ನಂತರ ಸೇಂಟ್ ಪಾಟ್ರೆಲ್‌ನಲ್ಲಿ ಅವರ ಕುಟುಂಬದಿಂದ ಪೂಜೆ ಇದೆ ಎಂದು ಮಾಹಿತಿ ನೀಡಿದರು.