ಬೆಂಗಳೂರು:ಉದ್ಯಮಿ ಮನೆಯನ್ನು ದೋಚಿದ್ದ ಒಡಿಶಾದ ಮೂಲದ ಮೂವರು ಆರೋಪಿಗಳನ್ನು ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಫುಲ್ಲಾ ಮಲ್ಲಿಕ್, ಭಕ್ತ ಹರಿ ಮಲ್ಲಿಕ್ ಹಾಗೂ ನಬೀನ್ ಸೊನಾರಿ ಬಂಧಿತ ಆರೋಪಿಗಳು. ಒಡಿಶಾ ಭಾಗದ ಕುಖ್ಯಾತ ದರೋಡೆಕೋರರ ಸಹೋದರರಿಬ್ಬರ ಹಿನ್ನೆಲೆಯಿಂದ ಪ್ರೇರೇಪಿತರಾಗಿದ್ದ ಆರೋಪಿಗಳು, ಅದೇ ಮಾದರಿ ತಾವೂ ಸಹ ದರೋಡೆ ಮಾಡಿ ದಿಢೀರ್ ಶ್ರೀಮಂತರಾಗುವ ಕನಸು ಕಂಡಿದ್ದರು.
ಅದರಂತೆ ಕೋರಮಂಗಲದ 3ನೇ ಬ್ಲಾಕ್‌ನ ಉದ್ಯಮಿಯೊಬ್ಬರ ಕುಟುಂಬ ಅನ್ಯ ರಾಜ್ಯಕ್ಕೆ ಪ್ರವಾಸಕ್ಕೆ ಹೋಗಿದ್ದ ಸಮಯ ಬಳಸಿಕೊಂಡು ಮನೆಗೆ ಆರೋಪಿಗಳು ನುಗ್ಗಿದ್ದರು. ಸೆಕ್ಯುರಿಟಿ ಗಾರ್ಡ್, ಸಿಸಿಟಿವಿ ಕ್ಯಾಮೆರಾಗಳಿಲ್ಲದಿದ್ದರಿಂದ ಮನೆಯಲ್ಲಿದ್ದ ಡೈಮೆಂಡ್ ಚಿನ್ನಾಭರಣ ಬೆಳ್ಳಿ ನಾಣ್ಯಗಳು 3 ಲಕ್ಷ ಮೌಲ್ಯದ ಒಮೇಗಾ ವಾಚ್, ಲ್ಯಾಪ್ ಟ್ಯಾಪ್ ಕ್ಯಾಮರಾ ಹಾಗೂ ಟ್ಯಾಬ್ ದೋಚಿ ಪರಾರಿಯಾಗಿದ್ದರು. ಕದ್ದ ಚಿನ್ನಾಭರಣ ಮಾರಾಟ ಮಾಡಿ ಓರಿಸ್ಸಾದಲ್ಲಿ ಭವ್ಯ ಬಂಗಲೆ ನಿರ್ಮಾಣ ಕಾರ್ಯ ಆರಂಭಿಸಿದ್ದರು.
ಇತ್ತ ಮನೆಯಲ್ಲಿ ದರೋಡೆ ಆಗಿರುವುದನ್ನ ತಿಳಿದ ಮಾಲೀಕರು ಕೋರಮಂಗಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೊಲೀಸರು ಆರಂಭಿಸಿದ್ದರು. ಬರೋಬ್ಬರಿ 300 ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಶೋಧಿಸಿದ್ದ ಪೊಲೀಸರು ಅಂತಿಮವಾಗಿ ಒಡಿಶಾದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ ಸೇರಿದಂತೆ ಬರೋಬ್ಬರಿ 70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.
ಮನೆಗಳಿಗೆ ಕನ್ನ ಹಾಕಿದ್ದ ನೇಪಾಳಿ ಕಳ್ಳರ ಬಂಧನ: ಬೆಂಗಳೂರಿನ ಜೆ.ಪಿ.ನಗರ 2ನೇ ಹಂತದ ಮನೆಯೊಂದರಲ್ಲಿ ಪ್ರೇಮ್ ಹಾಗೂ ಲಕ್ಷ್ಮಿ ಸೆಜುವಲ್ ದಂಪತಿಯನ್ನು ಮೂರು ತಿಂಗಳ ಹಿಂದೆ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಫೆಬ್ರವರಿ 28ರಂದು ಮನೆ ಮಾಲೀಕ ದಂಪತಿ ತಿರುಪತಿಗೆ ತೆರಳಿದ್ದಾಗ ಮನೆಯಲ್ಲಿದ್ದ ಅವರ ಮಗ ಕಿರಣ್ಗೆ ಗೊತ್ತಾಗದಂತೆ ನಿದ್ರೆ ಮಾತ್ರೆ ಸೇವಿಸುವಂತೆ ಮಾಡಿದ್ದಾರೆ. ಬಳಿಕ ರಾತ್ರಿ ವೇಳೆ ತಮ್ಮ ಸಹಚರರಾದ ನೇತ್ರಾ ಶಾಹಿ, ಗೋರಕ್ ಬಹದ್ದೂರ್, ಭೀಮ್ ಬಹದ್ದೂರ್, ಅಂಜಲಿ, ಅಬೇಶ್ ಶಾಹಿ, ಪ್ರಶಾಂತ್, ಪ್ರಕಾಶ್ ನನ್ನು ಮನೆಗೆ ಕರೆಯಿಸಿಕೊಂಡಿದ್ದರು. ನಂತರ ಮನೆಯಲ್ಲಿದ್ದ ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು.