ಬೆಂಗಳೂರು:ಮಣ್ಣಲ್ಲಿ ಮಣ್ಣಾಗುವ ದೇಹಕ್ಕೆ ಅಂತ್ಯವಿದೆಯೇ ಹೊರತು, ದೇಹದ ಅಂಗಾಂಗಳಿಗಲ್ಲ. ಸಾವಿನ ನಂತರವೂ ಮತ್ತೊಂದು ದೇಹ ಸೇರುವ ಅಂಗವೂ ಜೀವಂತವಾಗಿರುತ್ತೆ. ಇತ್ತೀಚೆಗೆ ಅಂಗಾಂಗ ದಾನದ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದ್ದು, ದಾನಿಗಳ ಪ್ರಮಾಣವು ಕೂಡ ಹೆಚ್ಚಳವಾಗಿದೆ. ಆದರೆ ಕೊರೊನಾ ಎಂಬ ಈ ಡೆಡ್ಲಿ ವೈರಸ್ ಅಂಗಾಂಗ ದಾನಕ್ಕೂ ಕೂಡ ಅಡ್ಡಗಾಲು ಹಾಕಿದೆ.
ವೈರಸ್ ಭೀತಿಯಿಂದ ಜನರು ಅಂಗಾಂಗ ದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ, ಮಾರ್ಚ್ನಲ್ಲಿ ನಿಲ್ಲಿಸಿದ್ದ ಅಂಗಾಂಶ ಕಸಿ ಶಸ್ತ್ರಚಿಕಿತ್ಸೆಯು ರಾಜ್ಯದ ಪ್ರಮುಖ ನಗರಗಳಲ್ಲಿ ಶುರುವಾಗಿದೆ.
ಲಿವರ್, ಕಿಡ್ನಿಯ ಕಸಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗೆ ಕೊರೊನಾ ಬಹಳ ಪರಿಣಾಮ ಬೀರಿತ್ತು. ಅಂದಾಜು ಶೇ. 50 ರಿಂದ 60 ರಷ್ಟು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಕಡಿಮೆ ಆಗಿತ್ತು. ಕೊರೊನಾ ಪರೀಕ್ಷೆ ಮಾಡಿಸಬೇಕೆಂಬ ಕಾರಣಕ್ಕೆ ಜನರು ಅಂಗಾಂಗ ದಾನಕ್ಕೆ ಮುಂದೆ ಬರುತ್ತಿರಲಿಲ್ಲ. ಇದೀಗ ಲಾಕ್ಡೌನ್ ಸಡಿಲಿಕೆ ಬಳಿಕ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮತ್ತೆ ಶುರುವಾಗಿದ್ದು, ಯಾರಿಗೆ ತುರ್ತು ಅನಿವಾರ್ಯತೆ ಇದೆ ಎಂಬುದನ್ನ ನೋಡಿಕೊಂಡು ಮಾಡಲಾಗುತ್ತಿದೆ. ಹೆಚ್ಚುವರಿ ಮುಂಜಾಗ್ರತಾ ಕ್ರಮವನ್ನ ತೆಗೆದುಕೊಂಡು, ದಾನಿಗಳ ಕೋವಿಡ್ ಪರೀಕ್ಷೆ, ಸಿಟಿ ಸ್ಕ್ಯಾನ್ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಂಡು, ಬಳಿಕ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.