ಬೆಂಗಳೂರು: ರಾಜ್ಯದಲ್ಲಿ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಮುಕ್ತಯವಾಗ್ತಿದೆ. ಈ ಸಾಲಿನ ಮೇ ಮತ್ತು ಜೂನ್ ತಿಂಗಳ ಬೇಸಿಗೆ ರಜೆ ಅವಧಿ ಘೋಷಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಉಪಹಾರದ ಹಣವನ್ನು ತಾಂತ್ರಿಕ ಸಮಸ್ಯೆ ಹಿನ್ನೆಲೆ ಆಯಾ ಶಿಕ್ಷಕರ ಖಾತೆಗೆ ಜಮಾ ಮಾಡಲು ಸರ್ಕಾರ ಆದೇಶ ನೀಡಲಾಗಿದೆ.
1 ರಿಂದ 8ನೇ ತರಗತಿ ಫಲಾನುಭವಿ ವಿದ್ಯಾರ್ಥಿಗಳ 50 ದಿನಗಳ ಹಣವನ್ನ ಬ್ಯಾಂಕ್ ಖಾತೆ DBT ಮೂಲಕ ಪಾವತಿಸಲು 13454.05 ಲಕ್ಷ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ DBT ಮೂಲಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಅನುದಾನವನ್ನು ಪಾವತಿಸಲು ಆಧಾರ್ ಸಂಯೋಜನೆ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಳಂಬವಾದ ಕಾರಣ ಸಕಾಲದಲ್ಲಿ DBT ಮೂಲಕ ಪೂರ್ಣ ಪ್ರಮಾಣದ ಅನುದಾನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪಾವತಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ 2021-22ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ಕೆ-2 ಮುಖಾಂತರ ಶಾಲೆಗಳ ಮುಖ್ಯ ಶಿಕ್ಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಿ ನಂತರ ಮುಖ್ಯ ಶಿಕ್ಷಕರ ಬ್ಯಾಂಕ್ ಖಾತೆಯಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲು ಆರ್ಥಿಕ ಇಲಾಖೆಯಿಂದ ಸಮ್ಮತಿ ನೀಡಲಾಗಿದೆ.