ಕರ್ನಾಟಕ

karnataka

ಬ್ರಾಹ್ಮಣರಿಗೆ ಜಾತಿ-ಆದಾಯ ಪ್ರಮಾಣ ಪತ್ರ ನೀಡಲು ಅಸ್ತು; ಹೀಗಿದೆ ಮೀಸಲಾತಿ ವ್ಯವಸ್ಥೆ...

By

Published : Jul 19, 2020, 7:26 PM IST

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಆದೇಶದ ಅನುಷ್ಠಾನಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಲು ಸರ್ಕಾರಿ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶ ಇದೀಗ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ಈಗ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

ಪ್ರಧಾನ ಮಂತ್ರಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲಾತಿಯನ್ನು ಕಲ್ಪಿಸಿ, ಲೋಕಸಭೆ ಚುನಾವಣೆಗೆ ಕೆಲ ದಿನ ಮುನ್ನ ಆದೇಶ ಹೊರಡಿಸಿತ್ತು. ಈ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಹಾಗೂ ವಿವಿಧ ರಾಜ್ಯಗಳ ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಆ ನಡುವೆ ಇದೀಗ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಆದೇಶದ ಅನುಷ್ಠಾನಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಲು ಸರ್ಕಾರಿ ಆದೇಶ ಹೊರಡಿಸಿದೆ. ಆರ್ಥಿಕವಾಗಿ ಹಿಂದುಳಿದ ಅರ್ಹ ಬ್ರಾಹ್ಮಣರಿಗೆ ಸೂಕ್ತ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಪ್ರಮಾಣ ಪತ್ರಗಳನ್ನು ಪರಿಗಣಿಸಲು ಅನುಮತಿ ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಅಸಲಿ ಮೀಸಲಾತಿ ಹೇಗಿದೆ:

ನಮ್ಮ ರಾಜ್ಯದ ಮೀಸಲಾತಿ ವಿಂಗಡಣೆ ಗಮನಿಸಿದಾಗ ಪರಿಶಿಷ್ಟ ಜಾತಿಯವರಿಗೆ ಶೇ.15, ಪರಿಶಿಷ್ಟ ಪಂಗಡದವರಿಗೆ ಶೇ.3, ಒಬಿಸಿ ವರ್ಗಕ್ಕೆ ಶೇ.32 (ಕ್ಯಾಟಗರಿ 1: ಶೇ.4, ಕ್ಯಾಟಗರಿ 2A: ಶೇ.15, ಕ್ಯಾಟಗರಿ 2B:ಶೇ. 4, ಕ್ಯಾಟಗರಿ 3A: ಶೇ.4 ಹಾಗೂ ಕ್ಯಾಟಗರಿ 3B ಶೇ.5ರಷ್ಟು ಇದೆ) ಇದು ಒಟ್ಟು: ಶೇ.50. ಹಾಗೂ ಸಾಮಾನ್ಯ ವರ್ಗ ಶೇ.50 ರಷ್ಟು ಇದೆ. ಈಗ ಮೀಸಲಾತಿಯ ಪ್ರಮಾಣ ಶೇ.60ಕ್ಕೆ ಏರಿದ ನಂತರ ಅದು ಈ ಕೆಳಗಿನಂತೆ ಆಗಲಿದೆ ಎಂದು ಲೆಕ್ಕಾಚಾರ ಮಾಡಲಾಗುತ್ತಿದೆ.

ರಾಜ್ಯ ಅಥವಾ ಕೇಂದ್ರ ಸರ್ಕಾರದ ಆದಾಯ ಆಧಾರದಲ್ಲಿ ಮೀಸಲಾತಿ ನೀಡಲು ನಿರ್ಧರಿಸಿದ್ದು, ಇದೇ ಮೊದಲ ಬಾರಿಯಲ್ಲ. ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಮೀಸಲಾತಿ ಮುಂದುವರಿಯುತ್ತಿರುವುದರಿಂದ ಹೊಸ ಮೀಸಲಾತಿಯು ಆದಾಯ ಆಧರಿತ ವಿಶಿಷ್ಟ ಮೀಸಲಾತಿ ಯೋಜನೆ ಎಂದು ಗುರುತಿಸಿಕೊಳ್ಳುವುದಿಲ್ಲ. ಆದಾಯ ಮಾನದಂಡದಲ್ಲಿ ಸಾಮಾನ್ಯ ವರ್ಗದವರಿಗೆ ಶೇ. 10ರಷ್ಟು ಮತ್ತು ಜಾತಿ ಆಧಾರದಲ್ಲಿ ಶೇ. 50ರಷ್ಟು ಮೀಸಲಾತಿ ಸಿಗಲಿದೆ. ದೇಶದಲ್ಲಿ ಮೀಸಲಾತಿ ವಿಷಯದಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸಿರುವ ಎರಡು ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕವು 1963ರಿಂದ 1977ರ ವರೆಗೆ ಆರ್ಥಿಕ ಸ್ಥಿತಿಗತಿ ಮತ್ತು ಉದ್ಯೋಗದ ಆಧಾರದ ಮೀಸಲಾತಿ ವ್ಯವಸ್ಥೆಯನ್ನು ಹೊಂದಿತ್ತು.

ಹೆತ್ತವರ ವಾರ್ಷಿಕ ಆದಾಯ 1,200 ರೂ. ಮೀರಿರದ (ಬಳಿಕ ಅದನ್ನು 2,400 ರೂ. ಗಳಿಗೆ ಪರಿಷ್ಕರಿಸಲಾಗಿತ್ತು) ಕುಟುಂಬದ ಮಕ್ಕಳನ್ನು ಸರ್ಕಾರಿ ಉದ್ಯೋಗಕ್ಕೆ ಪರಿಗಣಿಸಲಾಗುತ್ತಿತ್ತು. ಜತೆಗೆ ಕೃಷಿಕರು ಮತ್ತು ಇತರ ಕುಶಲ ಕಾರ್ಮಿಕರ ಮಕ್ಕಳಿಗೂ ಈ ಅವಕಾಶವಿತ್ತು. ಇಲ್ಲಿ ಜಾತಿ ವಿಷಯವು ಪ್ರಧಾನವಾಗಿರಲಿಲ್ಲ. ಸರ್ಕಾರದ ಈ ಆದೇಶವನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ನ್ಯಾ. ಪಿ.ಬಿ. ಗಜೇಂದ್ರಗಡ್ಕರ್ ಅವರ ನೇತೃತ್ವದ ಪೀಠವು, 1963ರ ಡಾ. ಆರ್. ನಾಗನಗೌಡ ಸಮಿತಿಯ ಬಾಲಾಜಿ ವರ್ಸಸ್ ಮೈಸೂರು ರಾಜ್ಯ ಪ್ರಕರಣದ ತೀರ್ಪಿನ ಆಧಾರದಲ್ಲಿ ರದ್ದು ಮಾಡಿತ್ತಾದರೂ, ಸರ್ಕಾರ ಒಂದು ಮಧ್ಯಂತರ ವ್ಯವಸ್ಥೆಯ ಮೂಲಕ ಇದನ್ನು ಜಾರಿಗೆ ತಂದಿತ್ತು. ಹಿಂದುಳಿದ ವರ್ಗಗಳನ್ನು ನಿರ್ಧರಿಸಲು ಜಾತಿ ಮತ್ತು ಸಮುದಾಯವೇ ಆಧಾರವಾಗಬೇಕು ಎಂದು ಅಭಿಪ್ರಾಯಪಟ್ಟು ಸುಪ್ರೀಂಕೋರ್ಟ್ ಸರ್ಕಾರದ ಆದೇಶವನ್ನು ರದ್ದು ಮಾಡಿತ್ತು. ಬಾಲಾಜಿ ಪ್ರಕರಣದಲ್ಲಿಯೇ ಸುಪ್ರೀಂಕೋರ್ಟ್ ಗರಿಷ್ಠ ಮೀಸಲಾತಿ ಪ್ರಮಾಣವನ್ನು ಶೇ. 50 ಎಂದು ನಿಗದಿ ಮಾಡಿದೆ. 1993ರ ಇಂದ್ರಾ ಸಾಹಿ ವರ್ಸಸ್ ಕೇಂದ್ರ ಸರ್ಕಾರದ ಮಂಡಲ್ ವರದಿ ತೀರ್ಪಿನಲ್ಲಿ ಇದೇ ಅಭಿಪ್ರಾಯವನ್ನು ಪುನರಾವರ್ತಿಸಲಾಗಿತ್ತು.

ದೇವರಾಜ ಅರಸು ಸರ್ಕಾರವು ಮತ್ತೊಂದು ಹೊಸ ವ್ಯವಸ್ಥೆ ಜಾರಿಗೆ ತಂದಿದ್ದು, ವಾರ್ಷಿಕ 4,800 ರೂ. ಆದಾಯದೊಳಗಿನ ಹಿಂದುಳಿದ ವರ್ಗದ ಕುಟುಂಬದವರನ್ನು ಹಿಂದುಳಿದ ವಿಶೇಷ ಗುಂಪು ಎಂದು ಗುರುತಿಸಿ ಅವರಿಗೆ ಮೀಸಲಾತಿ ನೀಡಿತ್ತು. ಇದನ್ನು 1977ರಲ್ಲಿ ಮೀಸಲಾತಿಗಾಗಿ ರಚಿಸಿದ ಹಾವನೂರು ಕಮಿಷನ್​​ನನ್ನು ರೂಪಿಸಿದ ಬಳಿಕ ಜಾರಿಗೆ ತರಲಾಯಿತು. ಈ ಸ್ಪೆಷಲ್ ಕೆಟಗರಿ ರಿಸರ್ವೇಶನ್​​ನನ್ನು ಹೈಕೋರ್ಟಿನಲ್ಲಿ ಮತ್ತು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. (ಕೆ. ಸಿ. ವಸಂತ ಕುಮಾರ್ ವರ್ಸಸ್ ಕರ್ನಾಟಕ ರಾಜ್ಯ ಸರ್ಕಾರ 1985). ಆದಾಯ ಮೂಲ ಪರೀಕ್ಷೆಯು 2000ದ ಬಳಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೂ ಅನ್ವಯವಾಗ ಬೇಕು ಎಂದು ಇದಕ್ಕೆ ಸಂಬಂಧಿಸಿದ ನಿರ್ದಿಷ್ಟ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.

ಇದೀಗ ಎಲ್ಲವನ್ನೂ ಪರಿಗಣಿಸಿ ರಾಜ್ಯ ಸರ್ಕಾರ ಶೇ.10ರಷ್ಟು ಮೀಸಲಾತಿ ಘೋಷಿಸಿ ಆದೇಶ ಹೊರಡಿಸಿದೆ. ನಿಜಕ್ಕೂ ಇದೊಂದು ಐತಿಹಾಸಿಕ ನಿರ್ಧಾರ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ಒದಗಿಸುವ ಕಾರ್ಯ. 1991ರಲ್ಲೇ ನರಸಿಂಹ ರಾವ್ ಸರ್ಕಾರ ಮೇಲ್ವರ್ಗದ ಮೀಸಲಾತಿಯನ್ನು ಮೊದಲ ಬಾರಿಗೆ ಪರಿಚಯಿಸಿತ್ತು. ಆದರೆ ಸುಪ್ರೀಂಕೋರ್ಟ್ ತೀರ್ಪು ಸೇರಿದಂತೆ ಇತರ ಅಡೆತಡೆಗಳಿಂದಾಗಿ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಪರಿಶಿಷ್ಟ ಪಂಗಡ ಮತ್ತು ಪರಿಶೀಷ್ಟ ವರ್ಗಕ್ಕೆ ಮೀಸಲಾತಿ ನೀಡುವ ನಿರ್ಧಾರ ಸ್ವಾತಂತ್ರ್ಯ ಪೂರ್ವದಲ್ಲಿ ಬಂದಿತ್ತು. 1990ರ ಆರಂಭದಲ್ಲಿ ಮೀಸಲಾತಿಯನ್ನು ಉದ್ಯೋಗ ಕ್ಷೇತ್ರದಲ್ಲಿ ಇತರ ಹಿಂದುಳಿದ ವರ್ಗಕ್ಕೂ ವಿಸ್ತರಣೆಗೊಳಿಸಲಾಯಿತು. 2006ರಲ್ಲಿ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಿಗೂ ವಿಸ್ತರಿಸಲಾಯಿತು ಎಂದು ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಸಮಿತಿಯ ಸದಸ್ಯ ಕೇಶವ್ ತಿಳಿಸಿದ್ದಾರೆ.

ನಿರ್ಧಾರ ಸ್ವಾಗತಾರ್ಹ:

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇತರೇ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿದೆ. ಎಲ್ಲಾ ವರ್ಗ ಹಾಗೂ ಸಮುದಾಯದವರಿಗೂ ಈ ಮೀಸಲಾತಿ ಕುರಿತು ವಿವರ ನೀಡುವ ಕಾರ್ಯ ಸರ್ಕಾರ ಮಾಡಬೇಕು. ಇದರ ಅಗತ್ಯ ಹಾಗೂ ಅನಿವಾರ್ಯ ಮೇಲ್ವರ್ಗದ ಬಡವರಿಗೂ ಎಷ್ಟಿದೆ ಎಂಬುದನ್ನು ತಿಳಿ ಹೇಳಬೇಕು ಎಂದು ಅಖಿಲ ಭಾರತ ಬ್ರಾಹ್ಮಣ ಮಹಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಸುಬ್ರಹ್ಮಣ್ಯ ಶರ್ಮ ಅಭಿಪ್ರಾಯ ಪಟ್ಟಿದ್ದಾರೆ.

ABOUT THE AUTHOR

...view details