ಬೆಂಗಳೂರು:ಫ್ಲಾಟ್‌ವೊಂದನ್ನು ಮುಂಗಡವಾಗಿ ಕಾಯ್ದಿರಿಸಿ 30 ಲಕ್ಷ ಪಾವತಿಯ ಬಳಿಕ ಇನ್ನುಳಿದ ಮೊತ್ತವನ್ನು ಪಾವತಿಸಲಾಗದ ಗ್ರಾಹಕರೊಬ್ಬರಿಗೆ ಕಡಿತಗೊಳಿಸಿದ್ದ 17 ಲಕ್ಷ ರೂ.ಗಳಗಳಿಗೆ ಬಡ್ಡಿ ಸೇರಿಸಿ ಹಿಂದಿರುಗಿಸಲು ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
ಬೆಂಗಳೂರಿನ ಎನ್‌ಟಿವೈ ಬಡಾವಣೆಯ ಜೆ.ರಾಘವೇಂದ್ರ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಎಂ.ಶೋಭಾ ಮತ್ತು ಸದಸ್ಯರಾದ ಸುಮಾ ಅನಿಲ್ ಕುಮಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ದೂರುದಾರರು ಪ್ರಕರಣ ಸಂಬಂಧ ನ್ಯಾಯಾಂಗ ಹೋರಾಟ ನಡಿಸಿದಕ್ಕೆ ಪರಿಹಾರವಾಗಿ 10 ಸಾವಿರ ರೂ.ಗಳನ್ನು ಪಾವತಿ ಮಾಡಬೇಕು. ಜತೆಗೆ, ಈ ಆದೇಶವನ್ನು ಮುಂದಿನ 60 ದಿನಗಳಲ್ಲಿ ಪಾಲಿಸಬೇಕು. ವಿಫಲವಾದಲ್ಲಿ ಶೇ.12 ರಷ್ಟು ಬಡ್ಡಿಯನ್ನು ಸೇರಿಸಿ ಕೊಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಆದೇಶದಲ್ಲೇನಿದೆ:ದೂರುದಾರರು 86,06,800 ರುಗಳಿಗೆ ಫ್ಲಾಟ್ ಖರೀದಿ ಮಾಡಲು 2017ರಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂಗಡವಾಗಿ 30,81,352 ರೂ.ಗಳನ್ನು ಪಾವತಿ ಮಾಡಿದ್ದಾರೆ. ಕೊರೋನಾ ಕಾರಣದಿಂದ ಇನ್ನುಳಿದ 55,25,448 ರೂ.ಗಳನ್ನು ಪಾವತಿ ಮಾಡಿಲ್ಲ. ಪ್ರತಿವಾದಿಗಳಾದ ಶಿವಕುಮಾರ್ ಕುಟುಂಬ ಮತ್ತು ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಅವರು 2017ರಲ್ಲಿ ಫ್ಲಾಟ್‌ನ್ನು ಹಸ್ತಾಂತರಿಸುವುದಾಗಿ ತಿಳಿಸಿದ್ದರು.
ಆದರೆ, ದೂರುದಾರರಿಗೆ ಮಂಜೂರಾಗಿದ್ದ ಫ್ಲಾಟ್‌ನ್ನು 2021ರಲ್ಲಿ ಮತ್ತೊಬ್ಬ ವ್ಯಕ್ತಿಗೆ 1,04,70,000 ರೂ. ಗಳಿಗೆ ಮಾರಾಟ ಮಾಡಿ ಲಾಭವನ್ನೂ ಗಳಿಸಿದ್ದಾರೆ. ಆದರೆ, ದೂರುದಾದರು 2017ರಲ್ಲಿ ಒಪ್ಪಂದ ಮಾಡಿಕೊಂಡು ಅದೇ ವರ್ಷ ಹಣ ಪಾವತಿ ಮಾಡದೆ ದೂರು ಉಳಿಸಿದಿರುವುದರಿಂದ ಈ ಪ್ರಕ್ರಿಯೆಯಲ್ಲಿ ಪ್ರತಿವಾದಿಗಳಿಗೆ (ಡಿಕೆಶಿ ಕುಟುಂಬ) ನಷ್ಟವುಂಟಾಗಿಲ್ಲ. ಆದರೆ, 17 ಲಕ್ಷ ರೂ.ಗಳನ್ನು ಕಡಿತಗೊಳಿಸಿರುವುದು ಅಕ್ರಮವಾಗಿದೆ. ಆದ್ದರಿಂದ ಕಡಿತಗೊಳಿಸಿರುವ 17,77,422 ರೂ.ಗಳಿಗೆ ಒಪ್ಪಂದವಾದ ದಿನದಿಂದ ಶೇ.10 ರಷ್ಟು ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದು ಆಯೋಗ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:ದೂರುದಾರರಾದ ರಾಘವೇಂದ್ರ ಅವರು, ಡಿ.ಕೆ.ಶಿವಕುಮಾರ್, ಡಿ.ಕೆ ಮಂಜುಳಾ ಡಿ.ಕೆ ಸುರೇಶ್ ಹಾಗೂ ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್‌ನ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದ ಡಿವಿನಿಟಿ ಪ್ರಾಜೆಕ್ಟ್‌ನ ಫ್ಲಾಟ್‌ವೊಂದ್ನು 86,06,800 ರೂ.ಗಳಿಗೆ ನಿರ್ಮಾಣ ಮತ್ತು ಖರೀದಿಗೆ 2017ರ ಏಪ್ರಿಲ್ 10 ರಂದು ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೆ, ಮುಂಗಡವಾಗಿ 30,81,352 ರೂ.ಗಳನ್ನು ಪಾವತಿಸಿದ್ದರು, ಆದರೆ ಕೊರೋನಾ ಕಾರಣದಿಂದ 55,25,448 ಲಕ್ಷ ರು.ಗಳನ್ನು ನಿಗದಿತ ಸಮಯಕ್ಕೆ ಪಾವತಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಪ್ರತಿವಾದಿಗಗಳು ದೂರುದಾರರಿಗೆ ಯಾವುದೇ ಮಾಹಿತಿ ನೀಡದೆ ಒಪ್ಪಂದವನ್ನು ರದ್ದು ಮಾಡಿದ್ದರು.