ಬೆಂಗಳೂರು:ಲಕ್ಷಾಂತರ ರೂ. ಬೆಲೆಯ ಎರಡು ಚಿನ್ನದ ಬಳೆಗಳನ್ನು ಕೊಳ್ಳುವ ನೆಪದಲ್ಲಿ ಆರ್ಡರ್ ಮಾಡಿ ಮನೆಗೆ ಕೊಡಲು ಬಂದಿದ್ದ ವ್ಯಕ್ತಿಯಿಂದಲೇ ಬಳೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಆಯೇಷಾ, ಸೆಂಥಿಲ್ ಹಾಗೂ ಇಮ್ರಾನ್ ಪರಾರಿ ಆಗಿರುವ ಆರೋಪಿಗಳು. ನಗರದಲ್ಲಿ ಹಯಗ್ರೀವ ಡೈಮಂಡ್ಸ್ ಹೆಸರಿನಲ್ಲಿ ಅಂಗಡಿ ಹೊಂದಿರುವ ಬಾಲಾಜಿ ಎಂಬಾತ ಚಿನ್ನಾಭರಣ ಮಾರಾಟ ಹಾಗೂ ಅವುಗಳಿಗೆ ಹಾಲ್‌ಮಾರ್ಕ್ ಮಾಡಿಕೊಡುತ್ತಿದ್ದು, ಇವರ ಬಳಿ ಎಂಟು ವರ್ಷಗಳಿಂದ ಸತೀಶ್ ಎಂಬುವರು ಕೆಲಸ ಮಾಡುತ್ತಿದ್ದಾರೆ. ಆರ್ಡರ್ ಬಂದ ವಿಳಾಸಕ್ಕೆ ಚಿನ್ನಾಭರಣ ಕೊಟ್ಟು, ಹಣ ಪಡೆದುಕೊಂಡು ಬರುವುದು ಸತೀಶ್ ಕೆಲಸ.
ನ.15ರಂದು ಆರೋಪಿ ಆಯಿಷಾ, ಸೆಂಥಿಲ್ ಮೂಲಕ ಫೋನ್ ಮಾಡಿಸಿ ಒಂದು ಜೊತೆ ಚಿನ್ನದ ಬಳೆ ಬೇಕು ಎಂದಿದ್ದಳು. ಸತೀಶ್‌ಗೆ ಸೆಂಥಿಲ್ ಪರಿಚಯವಿದ್ದರಿಂದ ಆಕೆಯ ಜೊತೆ ವ್ಯವಹಾರಕ್ಕೆ ಒಪ್ಪಿ, ವಾಟ್ಸಪ್ ಮೂಲಕ ಚಿನ್ನದ ಬಳೆಗಳ ಫೋಟೋಗಳನ್ನು ಕಳುಹಿಸಿದ್ದರು. ಈ ವೇಳೆ ಆಕೆ, 20 ಕ್ಯಾರೆಟ್ ಚಿನ್ನದ ಬಳೆಗಳ ಬೆಲೆ ಕುರಿತು ವಿಚಾರಿಸಿದ್ದಳು. ಡೈಮೆಂಡ್ನಿಂದ ಕೂಡಿದ್ದ 61 ಗ್ರಾಂ ತೂಕದ ಬಳೆಗಳಿದ್ದು, 10 ಲಕ್ಷ ರೂ. ಆಗುತ್ತದೆ ಎಂದು ಅಂಗಡಿ ಮಾಲೀಕ ತಿಳಿಸಿದ್ದರು.