ಬೆಂಗಳೂರು :ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಡಿ ಖರೀದಿಸುವ ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ 1,250 ರೂ. ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು.
ಸದನ ಸಮಾವೇಶಗೊಂಡಾಗ ಕೊಬ್ಬರಿಗೆ ಬೆಲೆ ಕುಸಿತ ಕುರಿತ ಚರ್ಚೆಗೆ ಉತ್ತರ ನೀಡಿದ ಸಚಿವರು, ಇಂದಿನಿಂದ ಕೊಬ್ಬರಿಗೆ ಖರೀದಿಗೆ 1,250 ರೂ. ಪ್ರೋತ್ಸಾಹ ಧನ ನೀಡಲಾಗುವುದು. ಈ ಹಿಂದೆ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಮಾರಾಟ ಮಾಡಿದವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ 11,750 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರ 1,250 ರೂ. ಪ್ರೋತ್ಸಾಹ ಧನ ನೀಡಲಿದೆ ಎಂದರು.
ನಿನ್ನೆಯವರೆಗೆ ಕೇಂದ್ರದ ಏಜೆನ್ಸಿ ನ್ಯಾಪೆಡ್ ಮೂಲಕ ರಾಜ್ಯ ಏಜೆನ್ಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ 45,038 ಮೆಟ್ರಿಕ್ ಟನ್ ಉಂಡೆ ಕೊಬ್ಬರಿಗೆ ಖರೀದಿಸಲಾಗಿದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 6.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 26.06 ಲಕ್ಷ ಮೆಟ್ರಿಕ್ ಟನ್ ತೆಂಗು ಹಾಗೂ ಕೊಬ್ಬರಿಗೆ ಉತ್ಪಾದನೆಯಾಗಿದೆ. ಎಂಎಸ್‍ಪಿ ಅಡಿ ಕೊಬ್ಬರಿಗೆ ಖರೀದಿಗೆ 37,632 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನಿನ್ನೆಯವರೆಗೆ 31,641 ರೈತರು ಪ್ರಯೋಜನ ಪಡೆದಿದ್ದಾರೆ. ಜುಲೈ 26ರವರೆಗೂ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ ಎಂದು ಹೇಳಿದರು.
ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಲ್ ಕೊಬ್ಬರಿಗೆ 7,700 ರಿಂದ 8,020 ರೂ.ವರೆಗೆ ಮಾರಾಟವಾಗುತ್ತಿದೆ. ರಾಜ್ಯ ಸರ್ಕಾರವು ಕೊಬ್ಬರಿಗೆ ಖರೀದಿ ಪ್ರಮಾಣ ಹೆಚ್ಚಳ ಹಾಗೂ ಖರೀದಿ ಅವಧಿ ವಿಸ್ತರಣೆಗೆ ಕೇಂದ್ರ ಸರ್ಕಾರವನ್ನು ಕೋರಿದೆ. ಕೇಂದ್ರ ಸರ್ಕಾರ ಖರೀದಿ ಪ್ರಮಾಣ ಹೆಚ್ಚಳ ಹಾಗೂ ಅವಧಿ ವಿಸ್ತರಣೆಗೆ ಅನುಮತಿ ನೀಡಿದ ಬಳಿಕ ನೋಂದಾಯಿಸುವವರಿಗೂ ಪ್ರೊತ್ಸಾಹಧನ ದೊರೆಯಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.