ಬೆಂಗಳೂರು: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅರೆನ್ಯಾಯಿಕ ನ್ಯಾಯಾಲಯದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳ ಕಡ್ಡಾಯ ಹಾಜರಾತಿಗೆ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) 48(4) ಮತ್ತು 48(5)ರ ಅಡಿ ಜರುಗುವ ವಿಚಾರಣೆಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಾಗುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಗ್ರಾಮ ಪಂಚಾಯತ್ಗಳ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರ ದುರುಪಯೋಗ ಮತ್ತು ಹಣ ದುರಪಯೋಗ ಪಡಿಸಿಕೊಂಡ ಪ್ರಕರಣದಡಿ ಮತ್ತು ನಿರಂತರವಾಗಿ ಗ್ರಾಮ ಪಂಚಾಯತ್ ಸಭೆಗಳಿಗೆ ಗೈರು ಹಾಜರಾಗುವ ಮತ್ತು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸದಸ್ಯತ್ವ ಹೊಂದುವ ಪ್ರಕರಣಗಳಲ್ಲಿ ಅಪರ ಮುಖ್ಯ ಕಾರ್ಯದರ್ಶಿಯವರ ಅರೆನ್ಯಾಯಿಕ ನ್ಯಾಯಲಯದಲ್ಲಿ ವಿಚಾರಣೆ ನಡೆಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ವಿಚಾರಣೆಯನ್ನು ಜರುಗಿಸುವಾಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪರವಾಗಿ ಹಿರಿಯ ಅಧಿಕಾರಿಗಳು ವಿಚಾರಣೆಗೆ ಗೈರಾಗುತ್ತಿರುವುದನ್ನು ಗಮನಿಸಿ ಈ ನಿರ್ದೇಶನ ಹೊರಡಿಸಲಾಗಿದೆ.